ಹೈದರಾಬಾದ್: 75ನೇ ಸ್ವಾತಂತ್ರ್ಯೋತ್ಸವ ವರ್ಷಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬೂಧವಾರ ದೇಶದ ಗಣ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಾಮೋಜಿ ಗ್ರೂಪ್ ಮುಖ್ಯಸ್ಥ ರಾಮೋಜಿ ರಾವ್ ಅವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ರಾಮೋಜಿ ರಾವ್, ಆಜಾದಿ ಕಾ ಅಮೃತ್ ಉತ್ಸವವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದು, ಇದಕ್ಕಾಗಿ ಇಂದು ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ. ಈ ವರ್ಷದ ಆಗಸ್ಟ್ 15 ರಂದು ಪ್ರಾರಂಭವಾದ ಲೇಖನಗಳು ಮುಂದಿನ ವರ್ಷ ಆಗಸ್ಟ್ 15 ರವರೆಗೆ ಮುಂದುವರಿಯುತ್ತವೆ. ಪ್ರತಿದಿನ ಹೊಸ ಲೇಖನದ ಮೂಲಕ ಓದುಗರಿಗೆ ವಿಭಿನ್ನ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಭವಿಷ್ಯದ ದೃಷ್ಟಿಯಿಂದ ವರ್ಷವಿಡೀ ಪ್ರಕಟವಾದ ಲೇಖನಗಳನ್ನು ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳನ್ನು ಹೊರತರಲಾಗುವುದು ಎಂದು ಅವರು ವಿವರಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ದೇಶದಲ್ಲಿ ನಶಿಸಿ ಹೋಗುತ್ತಿರುವ ಕಲೆ ಮತ್ತು ಕರಕುಶಲ ವಸ್ತುಗಳನ್ನು ಸಂರಕ್ಷಿಸಲು ಕ್ರಮಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರಿಗೆ ರಾಮೋಜಿ ರಾವ್ ಮನವಿ ಮಾಡಿದ್ದಾರೆ.
'ಶ್ರೇಷ್ಠ ಭಾರತೀಯ ಸಂಸ್ಕೃತಿ, ಕಲೆ, ಕರಕುಶಲತೆ ಉಳಿಸಿ'
ಆಜಾದಿ ಕಾ ಅಮೃತ ಮಹೋತ್ಸವದ ಗೌರವಾರ್ಥವಾಗಿ ನಾನು ಒಂದು ಸೂಚನೆಯನ್ನು ಪ್ರಸ್ತಾಪಿಸುತ್ತಿದ್ದೇನೆ. ಭಾರತವು ಕಲೆ, ಕರಕುಶಲ ಮತ್ತು ಸಂಸ್ಕೃತಿಯಲ್ಲಿ ಎಷ್ಟು ಶ್ರೇಷ್ಠವಾಗಿದೆ ಎಂಬುದು ನಮಗೆ ತಿಳಿದಿದೆ. ಆದರೆ ಕಾಲಾನಂತರದಲ್ಲಿ ಆ ಕಲೆಗಳು, ಕರಕುಶಲ ವಸ್ತುಗಳು ಕ್ರಮೇಣ ನಶಿಸಿ ಹೋಗುತ್ತಿವೆ. ಈ ರೀತಿಯಾಗಿ ಶ್ರೇಷ್ಠ ಭಾರತೀಯ ಸಂಸ್ಕೃತಿ, ಕಲೆ ಹಾಗೂ ಕರಕುಶಲತೆಯನ್ನು ಇಡೀ ಜಗತ್ತಿಗೆ ತಲುಪಿಸಬೇಕೆಂದು ಹೇಳಿದ್ದಾರೆ.
ತೆಲುಗು ರಾಜ್ಯಗಳ ಸಿಎಂಗಳು ಸಭೆಯಲ್ಲಿ ಭಾಗಿ
75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಯೋಜಿಸಲು ಪ್ರಧಾನಿ ನೇತೃತ್ವದಲ್ಲಿ ರಾಷ್ಟ್ರೀಯ ಸಮಿತಿಯನ್ನು ಈ ಹಿಂದೆ ರಚಿಸಲಾಗಿದೆ. ಸಮಿತಿಯು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯಪಾಲರು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು, ವಿಜ್ಞಾನಿಗಳು, ಅಧಿಕಾರಿಗಳು, ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ಆಧ್ಯಾತ್ಮಿಕ ಚಿಂತಕರು, ಕಲಾವಿದರು ಹಾಗೂ ಚಿತ್ರರಂಗದ ಗಣ್ಯರನ್ನು ಒಳಗೊಂಡಿದೆ.
ನಿನ್ನೆ ರಾಷ್ಟ್ರೀಯ ಸಮಿತಿ ಸದಸ್ಯರೊಂದಿಗೆ ಮೋದಿ ಸಭೆ ನಡೆಸಿದರು. ಸಭೆಯಲ್ಲಿ ಕೇಂದ್ರ ಸಚಿವರು ನೇರವಾಗಿ ಪಾಲ್ಗೊಂಡಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಲವು ರಾಜಕೀಯ ಮುಖಂಡರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ತೆಲುಗು ರಾಜ್ಯಗಳ ಮುಖ್ಯಮಂತ್ರಿಗಳಾದ ಕೆಸಿಆರ್, ಜಗನ್ ಮತ್ತು ತೆಲುಗು ದೇಶಂ ನಾಯಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಜೊತೆಗಿನ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ತೆಲಂಗಾಣದಲ್ಲಿ ಒಂದೇ ದಿನ 14 ಒಮಿಕ್ರಾನ್ ಕೇಸ್ ಪತ್ತೆ.. ನಾನ್ ರಿಸ್ಕ್ ದೇಶಗಳಿಂದ ಬಂದ ಹೆಚ್ಚು ಜನಕ್ಕೆ ವೈರಸ್ ದೃಢ!