ಮುಂಬೈ: ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಶೀಝಾನ್ ಖಾನ್ಗೆ ಕಠಿಣ ಶಿಕ್ಷೆಯಾಗಬೇಕು. ಇದು ಖಂಡಿತವಾಗಿಯೂ ಆಗುತ್ತದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ. ಆರೋಪಿ ಆಕೆಗೆ ದ್ರೋಹ ಎಸಗಿದ್ದಾನೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದರು.
ಡಿಸೆಂಬರ್ 24 ರಂದು ಟಿವಿ ಚಿತ್ರೀಕರಣ ಸೆಟ್‌ನ ವಾಶ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗುವ ಹದಿನೈದು ದಿನಗಳಿಗೆ ಮೊದಲು ತುನಿಶಾ ಮತ್ತು ಶೀಝಾನ್ ಬೇರ್ಪಟ್ಟಿದ್ದರು. ವಿಚಾರಣೆಯಲ್ಲಿ ಶೀಝಾನ್, ತುನಿಶಾ ಬ್ರೇಕ್ ಅಪ್ ಆದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ. ಆದರೆ ಆ ಸಮಯದಲ್ಲಿ ನಾನು ಅವಳನ್ನು ಉಳಿಸಿದೆ. ಆಗ ತುನಿಶಾಳ ತಾಯಿ ಆಕೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಕೇಳಿಕೊಂಡಿದ್ದರು.
ಇದನ್ನೂ ಓದಿ: ನಟಿ ತುನಿಶಾ ಶರ್ಮಾ ಆತ್ಮಹತ್ಯೆ: ಸಹನಟ ಶೀಝಾನ್ ಖಾನ್ ಪೊಲೀಸ್ ಕಸ್ಟಡಿಗೆ
ಮದುವೆಯ ಹುಸಿ ಭರವಸೆ: ಶೀಝಾನ್ ಮದುವೆ ಆಗುವುದಾಗಿ ಭರವಸೆ ನೀಡಿ ತುನೀಶಾಗೆ ವಂಚಿಸಿದ್ದಾನೆ ಎಂದು ಆಕೆಯ ತಾಯಿ ವನಿತಾ ಆರೋಪಿಸಿದ್ದಾರೆ. ಶೀಝಾನ್ ತುನಿಶಾ ಜೊತೆ ಸಂಬಂಧ ಹೊಂದಿದ್ದ ಸಂದರ್ಭದಲ್ಲಿ ಬೇರೊಬ್ಬ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗ್ತಿದೆ. ಮೂರ್ನಾಲ್ಕು ತಿಂಗಳ ಕಾಲ ತುನಿಶಾ ಜೊತೆ ಇದ್ದು, ನಂತರ ಬೇರೆ ಹುಡುಗಿಯೊಂದಿಗೆ ಆತ ಸಂಬಂಧ ಮುಂದುವರೆಸಿದ್ದ ಎಂದು ಸೋಮವಾರ ಮಾಧ್ಯಮ ಉದ್ದೇಶಿಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಶೀಝಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವನಿತಾ ಒತ್ತಾಯಿಸಿದರು. ಆತನಿಗೆ ಶಿಕ್ಷೆಯಾಗಬೇಕು. ಆತನನ್ನು ಬಿಡುಗಡೆ ಮಾಡಬಾರದು. ನಾನು ನನ್ನ ಮಗುವನ್ನು ಕಳೆದುಕೊಂಡಿದ್ದೇನೆ ಎಂದು ಕಂಗಾಲಾದ ತಾಯಿ ವಿಡಿಯೋದಲ್ಲಿ ಹೇಳಿದ್ದಾರೆ. ತುನಿಶಾ ಸಾವಿನ ನಂತರ, ಸಹನಟ ಮತ್ತು ಮಾಜಿ ಗೆಳೆಯ ಶೀಝಾನ್ ಖಾನ್ ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ವನಿತಾ ಆರೋಪಿಸಿ ವಾಲೀವ್ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲು: ವನಿತಾ ದೂರಿನ ಬಳಿಕ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 'ಅಲಿ ಬಾಬಾ: ದಾಸ್ತಾನ್ ಇ ಕಾಬೂಲ್' ಸ್ಟಾರ್ನನ್ನು ವಾಲೀವ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವಸಾಯಿ ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ತನಿಖೆ: ಶೀಝಾನ್ ಮತ್ತು ತುನಿಶಾ ಎಂದಿನಂತೆ ಸೆಟ್‌ನಲ್ಲಿ ಒಟ್ಟಿಗೆ ಊಟಕ್ಕೆ ಹೋಗುವ ಮುನ್ನ ಮೇಕಪ್ ರೂಂನಲ್ಲಿ ಭೇಟಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತುನಿಶಾ ಆ ದಿನ ಊಟ ಮಾಡಲಿಲ್ಲ. ಮಧ್ಯಾಹ್ನದ ಊಟದ ನಂತರ ಶೀಝಾನ್ ಕೆಲಸದಲ್ಲಿ ನಿರತನಾದನು. ತುನಿಶಾ ವಾಶ್‌ರೂಮ್‌ಗೆ ಹೋಗಿ ಬಹಳ ಹೊತ್ತಾದರೂ ಹಿಂತಿರುಗದಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಸ್ವಲ್ಪ ಸಮಯದ ನಂತರ ಆಕೆ ಶವವಾಗಿ ಪತ್ತೆಯಾಗಿದ್ದಳು.
ಇದನ್ನೂ ಓದಿ: ಶೀಝಾನ್ ಖಾನ್ಗೆ ಕಠಿಣ ಶಿಕ್ಷೆಯಾಗಬೇಕು: ತುನಿಶಾ ತಾಯಿ ಆಗ್ರಹ
ನಟ ಪಾರ್ಥ್ ಝುಟ್ಶಿ ವಿಚಾರಣೆ: ಮತ್ತೋರ್ವ ಸಹ ನಟ ಪಾರ್ಥ್ ಝುಟ್ಶಿ ಅವರನ್ನು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪಾರ್ಥ್ ಝುಟ್ಶಿ, ಪೊಲೀಸರು ನನ್ನನ್ನು ವಿಚಾರಣೆಗೆ ಕರೆದರು. ನನ್ನಲ್ಲಿ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದರು. ನಾನು ತುನಿಶಾ ಶರ್ಮಾ ಅವರ ಸಂಬಂಧಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ನನಗೆ ಯಾವುದೇ ಐಡಿಯಾ ಇಲ್ಲ, ಅದು ಅವರ ಆಂತರಿಕ ವಿಷಯ. ಘಟನೆ ಸಂಭವಿಸಿದ ನಂತರ ನನಗೆ ವಿಷಯ ಮುಟ್ಟಿತು. ಬಳಿಕ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು ಎಂದು ಹೇಳಿದ್ದರು.