ಅಮರಾವತಿ (ಮಹಾರಾಷ್ಟ್ರ): ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಲು ಯುವಕರಿಗಾಗಿ ಕೇಂದ್ರ ಸರ್ಕಾರ ಘೋಷಿಸಿದ ಅಗ್ನಿಪಥ್ ಯೋಜನೆ ಉತ್ಕೃಷ್ಟವಾಗಿದೆ. ಇಂಥ ಯೋಜನೆಗೂ ವಿರೋಧ ವ್ಯಕ್ತವಾಗುತ್ತಿರುವುದು ದುರದೃಷ್ಟಕರ. ಆದರೆ ಸರ್ಕಾರದ ಇತರ ಯೋಜನೆಗಳಲ್ಲಿ ಇರುವಂತೆ ಇದರಲ್ಲೂ ದಲಿತರಿಗೆ ಮೀಸಲಾತಿ ಕೊಡಬೇಕೆಂದು ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ಸಚಿವ ರಾಮದಾಸ ಅಠವಲೆ ಹೇಳಿದರು.
ದೇಶದ ಯುವಕರ ಒಳಿತಿಗಾಗಿ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷವು ಯುವಕರನ್ನು ಗಲಭೆ ಮಾಡುವಂತೆ ಪ್ರಚೋದಿಸುತ್ತಿದೆ ಎಂದು ಅವರು ಆರೋಪಿಸಿದರು.
ಅಗ್ನಿಪಥ್ ಕೇವಲ ದಲಿತರು ಅಥವಾ ಯಾವುದೋ ಒಂದು ಸಮುದಾಯದ ಒಳಿತಿಗಾಗಿ ಮಾಡಿದ ಯೋಜನೆಯಲ್ಲ. ಯೋಜನೆಗೆ ಸಂಬಂಧಿಸಿದಂತೆ ಯುವಕರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ನಾಲ್ಕು ವರ್ಷ ಸೇವೆ ಸಲ್ಲಿಸಿದ ಯುವಕರಿಗೆ ಮೀಸಲಾತಿಯೂ ಸಿಗಲಿ ಎಂದರು.
ಮುಂಬರುವ ಜಿಲ್ಲಾ ಪರಿಷತ್ತಿನ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ. ನಮ್ಮ ಪಕ್ಷಕ್ಕೆ ನ್ಯಾಯಯುತವಾದ ಸಂಖ್ಯೆಯ ಸ್ಥಾನಗಳನ್ನು ಬಿಟ್ಟುಕೊಡುವಂತೆ ದೇವೇಂದ್ರ ಫಡ್ನವೀಸ್ ಹಾಗೂ ನಿತಿನ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ರಾಮದಾಸ ಅಠವಲೆ ತಿಳಿಸಿದರು.