ಪಾಟ್ನಾ (ಬಿಹಾರ) : 'ಶ್ರೇಷ್ಠ ಹಿಂದೂ ಧರ್ಮಗ್ರಂಥ ರಾಮಚರಿತಮಾನಸವನ್ನು ಮನುಸ್ಮೃತಿಯಂತೆ ಸುಡಬೇಕು. ಅದು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದೆ' ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಬುಧವಾರ ಪಾಟ್ನಾದ ಬಾಪು ಸಭಾಂಗಣದಲ್ಲಿ ನಡೆದ ನಳಂದ ಮುಕ್ತ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಬಿಹಾರ ರಾಜ್ಯಪಾಲ ಫಗು ಚೌಹಾಣ್ ಸಮ್ಮುಖದಲ್ಲಿ ಅವರು ಈ ಹೇಳಿಕೆ ನೀಡಿದರು. ಸಚಿವರ ಈ ಹೇಳಿಕೆಯು ರಾಜಕೀಯ ಕೆಸರೆರಚಾಟಕ್ಕೆ ವಸ್ತುವಾಗುತ್ತಿದೆ.
'ರಾಮಚರಿತಮಾನಸ ದ್ವೇಷ ಹರಡುವ ಪುಸ್ತಕ': 'ರಾಮಚರಿತಮಾನಸ'ವು ಸಮಾಜದಲ್ಲಿ ದ್ವೇಷವನ್ನು ಹರಡುವ ಪುಸ್ತಕವಾಗಿದೆ. ಇದು ಸಮಾಜದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಶಿಕ್ಷಣ ಸೇರಿದಂತೆ ಇತರೆ ಹಕ್ಕುಗಳನ್ನು ಪಡೆಯುವುದನ್ನು ತಡೆಯುತ್ತದೆ. ಮನುಸ್ಮೃತಿ ಸಮಾಜದಲ್ಲಿ ದ್ವೇಷದ ಬೀಜಗಳನ್ನು ಬಿತ್ತಿತ್ತು. ರಾಮಚರಿತಮಾನಸ ಸಹ ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುತ್ತಿದೆ' ಎನ್ನುವುದು ಸಚಿವರ ವಾದ.
'ಪ್ರಸ್ತುತ ಗುರು ಗೋಳ್ವಾಲ್ಕರ್ ಅವರ ಚಿಂತನೆಗಳು ಸಮಾಜದಲ್ಲಿ ದ್ವೇಷದ ಭಾವನೆಗಳನ್ನು ಹರಡುತ್ತಿವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟರು. ಏಕೆಂದರೆ, ಅದು ದಲಿತರು ಮತ್ತು ಹಿಂದುಳಿದವರ ಹಕ್ಕುಗಳನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತದೆ' ಎಂದು ಸಚಿವರು ಹೇಳಿದರು.
ರಾಮಚರಿತಮಾನಸದಲ್ಲಿ 'ಅದಂ ಜಾತಿ ಮೇ ವಿದ್ಯಾ ಪಾಯೇ, ಭಯತು ಯಥಾ ದೂಧ್ ಪಿಲಾಯೇ' ಎಂಬ ಶ್ಲೋಕವಿದೆ. ಇದರರ್ಥ 'ಕೆಳಜಾತಿಯ ಜನರು ಶಿಕ್ಷಣ ಪಡೆದ ನಂತರ ವಿಷಕಾರಿಯಾಗುತ್ತಾರೆ, ಹಾವು ಹಾಲು ಕುಡಿದ ಹಾಗೆ. ಎಷ್ಟೇ ಹಾಲು ಕುಡಿದರೂ ಹಾವಿನಲ್ಲಿ ವಿಷ ಅಡಕವಾಗಿರುತ್ತದೆ ಎಂಬರ್ಥವಿದೆ. ಇಂತಹ ಸಾಲುಗಳು ದೇಶದಲ್ಲಿ ಸಮಾನತೆ ಹುಟ್ಟುಹಾಕಲು ಮಾರಕ ಎಂದರು.
'ದ್ವೇಷ ದೇಶವನ್ನು ಶ್ರೇಷ್ಠಗೊಳಿಸುವುದಿಲ್ಲ': ಮನುಸ್ಮೃತಿ ಮತ್ತು ರಾಮಚರಿತಮಾನಸ ಪುಸ್ತಕವು ಗುರು ಗೋಲ್ವಾಲ್ಕರ್ ಅವರ ಆಲೋಚನೆಗಳ ಒಂದು ಭಾಗ. ಈ ಪುಸ್ತಕಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತವೆ. ಜನರಲ್ಲಿ ದ್ವೇಷವನ್ನು ಹುಟ್ಟುಹಾಕುವ ಪುಸ್ತಕಗಳಾಗಿವೆ. ದ್ವೇಷವು ದೇಶವನ್ನು ಶ್ರೇಷ್ಠಗೊಳಿಸುವುದಿಲ್ಲ. ಪ್ರೀತಿಯು ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯುತ್ತದೆ ಎಂದು ಚಂದ್ರಶೇಖರ್ ತಿಳಿಸಿದರು.
ಇದನ್ನೂ ಓದಿ: ಸಂವಿಧಾನದ ಜಾಗದಲ್ಲಿ ಮನುಸ್ಮೃತಿ ಇರಿಸುವ ಯತ್ನ ನಡೆಯುತ್ತಿದೆ: ಪಿ.ಸಾಯಿನಾಥ್
ಕಮ್ಯುನಿಸ್ಟ್ ನಾಯಕ ಎಂ.ಬಿ.ರಾಜೇಶ್ ಹೇಳಿಕೆ: ಈ ತಿಂಗಳ ಆರಂಭದಲ್ಲಿ ಕೇರಳದ ಸಚಿವ ಮತ್ತು ಕಮ್ಯುನಿಸ್ಟ್ ನಾಯಕ ಎಂ.ಬಿ.ರಾಜೇಶ್ ಕೂಡ ಮನುಸ್ಮೃತಿಯ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. 'ಈ ಪುಸ್ತಕವು ಕ್ರೂರ ಜಾತಿ ವ್ಯವಸ್ಥೆಯನ್ನು ಆಧರಿಸಿದೆ ಎಂದು ಪ್ರತಿಪಾದಿಸಿದ್ದರು. ವರ್ಕಳ ಶಿವಗಿರಿ ಮಠದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜೇಶ್, ಕೇರಳಕ್ಕೆ ಆಚಾರ್ಯರಿದ್ದರೆ ಅದು ಶ್ರೀನಾರಾಯಣ ಗುರುಗಳೇ ಹೊರತು ಆದಿ ಶಂಕರಾಚಾರ್ಯರಲ್ಲ'.
ಶಂಕರಾಚಾರ್ಯರು ಮನುಸ್ಮೃತಿಯನ್ನು ಆಧರಿಸಿದ ಕ್ರೂರ ಜಾತಿ ವ್ಯವಸ್ಥೆಯ ಪ್ರತಿಪಾದಕರಾಗಿದ್ದರು. ಶ್ರೀ ನಾರಾಯಣ ಗುರುಗಳು ಜಾತಿ ಪದ್ಧತಿಯನ್ನು ಹೋಗಲಾಡಿಸುವ ಕೆಲಸ ಮಾಡಿದ್ದರು. ಶಂಕರಾಚಾರ್ಯರು ಜಾತಿ ವ್ಯವಸ್ಥೆಯನ್ನು ಬೆಂಬಲಿಸಿದ್ದು ಮಾತ್ರವಲ್ಲದೇ, ಅದರ ವಕ್ತಾರರೂ ಆಗಿದ್ದಾರೆ' ಎಂದು ಅವರು ಆರೋಪಿಸಿದ್ದರು.
ರಾಮಚರಿತಮಾನಸದ ಬಗ್ಗೆ ಮಾಹಿತಿ: ರಾಮಚರಿತಮಾನಸ 16ನೇ ಶತಮಾನದ ಭಾರತೀಯ ಭಕ್ತಿ ಕವಿ ತುಳಸಿದಾಸ (1532-1623) ರ ಅವಧಿಯಲ್ಲಿ ರಚಿಸಿದ ಮಹಾಕಾವ್ಯ. ರಾಮಚರಿತಮಾನಸ ಅಂದ್ರೆ "ರಾಮನ ಕಾರ್ಯಗಳ ಸರೋವರ" ಎಂದರ್ಥ. ಇದನ್ನು ಹಿಂದೂ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಿದವರೇ ಈಗ ಜೈಭೀಮ್ ಅಂತಾರೆ: ಅಂಬೇಡ್ಕರ್ ಮರಿ ಮೊಮ್ಮಗ ಉವಾಚ