ಲಖನೌ (ಉತ್ತರ ಪ್ರದೇಶ): ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಬಹುತೇಕ ಅರ್ಧದಷ್ಟು ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ, ಇತ್ತ ಧನಿಪುರ ಗ್ರಾಮದಲ್ಲಿ ಉದ್ದೇಶಿತ ಮಸೀದಿ, ಆಸ್ಪತ್ರೆ ಮತ್ತು ಗ್ರಂಥಾಲಯದ ಯೋಜನೆಗಳಿಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಸಿಕ್ಕಿಲ್ಲ.
ದೇಶದ ಬಹು ವಿವಾದಿತ ಪ್ರಕರಣವಾಗಿದ್ದ ಅಯೋಧ್ಯೆಯ ಬಗ್ಗೆ 2019ರ ನವೆಂಬರ್ನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ, ಮಸೀದಿಗೆ ಪರ್ಯಾಯ ಭೂಮಿ ನೀಡಲು ಆದೇಶಿಸಿತ್ತು. ಮಸೀದಿ ಹಾಗೂ ಆಸ್ಪತ್ರೆ, ಗ್ರಂಥಾಲಯದ ಕುರಿತ ವಿಷಯವಾಗಿ ಇಂಡೋ - ಇಸ್ಲಾಮಿಕ್ ಕಲ್ಚರ್ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಅಥಾರ್ ಹುಸೇನ್ 'ಈಟಿವಿ ಭಾರತ'ನೊಂದಿಗೆ ಮಾತನಾಡಿದ್ದು, ಆಡಳಿತ ಮಂಡಳಿಯಿಂದ ಮಸೀದಿಗೆ ಸಂಬಂಧಿಸಿದಂತೆ ಕೆಲವು ಅಡೆತಡೆಗಳಿವೆ.
ಅದನ್ನು ಶೀಘ್ರದಲ್ಲಿಯೇ ಪರಿಹರಿಸಿಕೊಳ್ಳಲಾಗುವುದು ಮತ್ತು ನೀಲನಕ್ಷೆಗೆ ಅನುಮೋದನೆ ಸಿಕ್ಕ ನಂತರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಕಟ್ಟಡ ನಿರ್ಮಿಸುವ ಮುನ್ನ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಬೇಕು. ಜೊತೆಗೆ ನಕ್ಷೆಗೆ ಮಂಜೂರಾತಿ ಪಡೆಯಬೇಕು.
ಸದ್ಯ ನಕ್ಷೆ ಪ್ರಗತಿ ಹಂತದಲ್ಲಿದೆ. ಉದ್ದೇಶಿತ ಮಸೀದಿಯನ್ನು ರಾಮ ಮಂದಿರದೊಂದಿಗೆ ಹೋಲಿಸುವುದು ಸರಿಯಲ್ಲ. ದೇಶದೆಲ್ಲೆಡೆ ರಾಮ ಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ 20 ಕೆಜಿ ಬೆಳ್ಳಿ ಹಾಸಿಗೆ ಉಡುಗೊರೆ