ವಿಶಾಖಪಟ್ಟಣ: ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥ ಮತ್ತು ಸುಪ್ರೀಂ ಕಮಾಂಡರ್ ರಾಮನಾಥ್ ಕೋವಿಂದ್ ಅವರು ಇಂದು ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯನ್ನು ಪರಿಶೀಲಿಸಿದರು.
'ದೇಶದ ಸೇವೆಯಲ್ಲಿ 75 ವರ್ಷಗಳು' ಎಂಬ ವಿಷಯದೊಂದಿಗೆ, ಭಾರತೀಯ ನೌಕಾಪಡೆಯು ತನ್ನ ಇತ್ತೀಚಿನ ಅತ್ಯಾಧುನಿಕ ಸ್ಥಳೀಯವಾಗಿ ನಿರ್ಮಿಸಲಾದ ಯುದ್ಧ ನೌಕೆಗಳ ಫ್ಲೀಟ್ ರಿವ್ಯೂನ 12 ನೇ ಆವೃತ್ತಿಯನ್ನು ಪ್ರದರ್ಶಿಸಿತು, ಇದನ್ನು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ 'ಆಜಾದಿ ಕಾ ಅಮೃತ್ ಮಹೋತ್ಸವ'ದ ನಿಮಿತ್ತ ನಡೆಸಲಾಗಿದೆ.
21-ಗನ್ ಸೆಲ್ಯೂಟ್ ಮತ್ತು ಸೆರಿಮೋನಿಯಲ್ ಗಾರ್ಡ್ ಆಫ್ ಆನರ್ ನಂತರ ಅಧ್ಯಕ್ಷೀಯ ವಿಹಾರ ನೌಕೆ ಎಂದು ಗೊತ್ತುಪಡಿಸಿದ, ಸ್ಥಳೀಯವಾಗಿ ನಿರ್ಮಿಸಲಾದ ಕಡಲಾಚೆಯ ಗಸ್ತು ನೌಕೆಯನ್ನು ಅಧ್ಯಕ್ಷರು ಪರಿಶೀಲಿಸಿದರು. ಇಲ್ಲಿಗೆ ರಾಷ್ಟ್ರಪತಿ ಅವರನ್ನು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಅವರು ಬರಮಾಡಿಕೊಂಡರು.
ಪರಿಶೀಲನೆಯ ಸಂದರ್ಭದಲ್ಲಿ ಫ್ಲೀಟ್ ಅನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಭಾರತೀಯ ನೌಕಾಪಡೆಯ ನಿರಂತರ ಜಾಗರೂಕತೆ, ಘಟನೆಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುವಲ್ಲಿ ಹಾಗೂ ಸುರಕ್ಷತೆ ಖಾತ್ರಿಪಡಿಸುವಲ್ಲಿ ಹೆಚ್ಚು ಯಶಸ್ವಿಯಾಗಿದೆ ಎಂದು ಹೇಳಿದ ಅವರು, ಭಾರತೀಯ ನೌಕಾಪಡೆ ಹೆಚ್ಚು ಸ್ವಾವಲಂಬಿಯಾಗುತ್ತಿರುವ ಬಗ್ಗೆ ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮದಲ್ಲಿ ಮುಂಚೂಣಿಯಲ್ಲಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ದೇಶಾದ್ಯಂತ ವಿವಿಧ ಸಾರ್ವಜನಿಕ ಮತ್ತು ಖಾಸಗಿ ಹಡಗುಕಟ್ಟೆಗಳಲ್ಲಿ ನಿರ್ಮಾಣವಾಗುತ್ತಿರುವ ಹಲವಾರು ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಸುಮಾರು 70 ಪ್ರತಿಶತದಷ್ಟು ಸಾಮಗ್ರಿಗಳು ಸ್ಥಳೀಯವಾಗಿವೆ.
ಭಾರತವು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಶೀಘ್ರದಲ್ಲೇ ದೇಶೀಯವಾಗಿ ನಿರ್ಮಿಸಿದ ವಿಮಾನವಾಹಕ ನೌಕೆ ‘ವಿಕ್ರಾಂತ್’ ಸೇವೆಗೆ ಸೇರ್ಪಡೆಗೊಳ್ಳಲಿದೆ. ಸ್ಥಳೀಯ ನೌಕಾ ಹಡಗು ನಿರ್ಮಾಣ ಸಾಮರ್ಥ್ಯಗಳ ಅಭಿವೃದ್ಧಿಯು 'ಆತ್ಮನಿರ್ಭರ ಭಾರತ' ಉಪಕ್ರಮದಲ್ಲಿ ಪ್ರಭಾವಶಾಲಿ ಕೊಡುಗೆಯಾಗಿದೆ ಎಂದು ಹೊಗಳಿದರು.
ಇದನ್ನೂ ಓದಿ: ರೋಟರಿ ಚಿತಾಗಾರದಲ್ಲಿ ಹರ್ಷ ಅಂತ್ಯಕ್ರಿಯೆ: ಈಶ್ವರಪ್ಪ, ಸಂಸದ ರಾಘವೇಂದ್ರ ಭಾಗಿ
ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮತ್ತು ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಜೆ ಚೌಹಾಣ್ ಅವರ ಸಮ್ಮುಖದಲ್ಲಿ ರಾಷ್ಟ್ರಪತಿಯವರಿಂದ ವಿಶೇಷ ಮೊದಲ ದಿನದ ಮುಖಪುಟ ಮತ್ತು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿಸಲಾಯಿತು.