ಹಿಸಾರ್ (ಹರಿಯಾಣ): ದೆಹಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನ ಸಂಬಂಧ ಇಂದು ಹಿಸಾರ್ನಲ್ಲಿ ಕಿಸಾನ್ ಪಂಚಾಯತ್ ನಡೆಸಲಾಯಿತು. ರೈತ ಮುಖಂಡ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಸಾವಿರಾರು ಮಂದಿ ರೈತರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ಬೆಳೆ ಕೊಯ್ಲು ಸಮಯದಲ್ಲಿ ರೈತರು ಮರಳಿ ತಮ್ಮ ಊರುಗಳಿಗೆ ತೆರಳುತ್ತಾರೆ ಎಂಬುದು ಕೇಂದ್ರದ ಅಭಿಪ್ರಾಯವಿದ್ದರೆ ಅದು ತಪ್ಪು, ಈ ಹೋರಾಟ 2 ತಿಂಗಳಿಗೆ ಅಂತ್ಯವಾಗುವುದಿಲ್ಲ. ಬೇಕಾದರೆ ರೈತ ತನ್ನ ಬೆಳೆಗಳಿಗೆ ಬೆಂಕಿ ಇಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವಶ್ಯಕತೆ ಇದ್ದರೆ ರೈತರು ತಾವು ಬೆಳೆದ ಬೆಳೆಯನ್ನು ಹೋರಾಟದ ದೃಷ್ಟಿಯಲ್ಲಿ ತ್ಯಾಗ ಮಾಡುತ್ತಾರೆ ಎಂದರು.
ರೈತರಿಗೆ ಎಷ್ಟು ಬೆಳೆಯ ಅಗತ್ಯವಿದೆಯೋ ಅದನ್ನು ಮನೆಯಲ್ಲಿಯೇ ಇಟ್ಟು ಉಳಿದ ಬೆಳೆಗೆ ಬೆಂಕಿ ಹಚ್ಚುತ್ತಾರೆ. ರೈತರ ಬಗ್ಗೆ ತಪ್ಪು ತಿಳಿವಳಿಕೆ ಇಟ್ಟುಕೊಳ್ಳಬಾರದು. ನಾವೂ ಬೆಳೆ ಕೊಯ್ಲು ಮಾಡಲು ಸಹ ತೆರಳುತ್ತೇವೆ ಜೊತೆಗೆ ಪ್ರತಿಭಟನೆಯನ್ನೂ ಮುಂದುವರಿಸುತ್ತೇವೆ ಎಂದಿದ್ದಾರೆ.
40 ಲಕ್ಷ ಟ್ರ್ಯಾಕ್ಟರ್ ಮೂಲಕ ಮುಂದಿನ ಜಾಥಾ ನಡೆಸುವ ಗುರಿಯಿದ್ದು, ದೇಶದಾದ್ಯಂತ ಜಾಥಾ ನಡೆಸಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಜುವೆಲರ್ಸ್ ಅಂಗಡಿ ಕಳ್ಳತನ: 25 ಸವರನ್ ಚಿನ್ನ ದೋಚಿ ಪರಾರಿಯಾದ ಖದೀಮರು