ಭರತ್‌ಪುರ (ರಾಜಸ್ಥಾನ): ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಹೋರಾಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕರೂಲಿ ಜಿಲ್ಲೆಯಲ್ಲಿ ಕಿಸಾನ್ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಟಿಕಾಯತ್ ಅವರು ಭರತ್‌ಪುರದಲ್ಲಿ ತಂಗಿದ್ದರು. ಈ ವೇಳೆ ಈಟಿವಿ ಭಾರತದ ಪ್ರತಿನಿಧಿ ಅವರೊಂದಿಗೆ ವಿಶೇಷ ಸಂವಾದ ನಡೆಸಿದ್ದಾರೆ. "ಕೃಷಿ ಕಾನೂನಿನ ವಿರುದ್ಧ ಇಡೀ ದೇಶದ ರೈತರು ಒಗ್ಗೂಡಿದ್ದಾರೆ. ಇಂದಿನಿಂದ ರಾಜಸ್ಥಾನದಲ್ಲಿಯೂ ಮಹಾಪಂಚಾಯತ್ನ್ನು ಮಾಡಲಾಗುತ್ತಿದೆ. ಇದರಿಂದ ರೈತರ ಚಳವಳಿಗೆ ಹೆಚ್ಚಿನ ವೇಗವನ್ನು ನೀಡಬಹುದು" ಎಂದು ಹೇಳಿದರು.
ಇದನ್ನು ಓದಿ: ಶೋ ರೂಂಗೆ ನುಗ್ಗಿ 32 ಲಕ್ಷ ಮೌಲ್ಯದ ಎರಡು ಕಾರು ಕದ್ದ ಖದೀಮರು
"ಕೇಂದ್ರ ಸರ್ಕಾರ ರೈತರ ಧ್ವನಿಯನ್ನು ಕೇಳದಿದ್ದರೂ, ರೈತ ನಿರಂತರವಾಗಿ ಆಂದೋಲನ ನಡೆಸುತ್ತಿದ್ದಾನೆ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕಾನೂನು ಇರಬೇಕು. ಹಾಗೆಯೇ ಕೃಷಿ ಮಸೂದೆ ರದ್ದು ಮಾಡಬೇಕು. ಇದರಿಂದ ದೇಶದ ರೈತರು ಪ್ರಯೋಜನ ಪಡೆಯಲಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ಯಾವುದೇ ಕಾನೂನು ಇಲ್ಲದಿದ್ದರೆ, ದೊಡ್ಡ ಕಂಪನಿಗಳು ಅಗ್ಗವಾಗಿ ಸರಕುಗಳನ್ನು ಖರೀದಿಸುತ್ತವೆ. ಅವರು ತನ್ನ ಗೋದಾಮಿನಲ್ಲಿ ಸಂಗ್ರಹಿಸಿ ದುಬಾರಿ ದರದಲ್ಲಿ ಮಾರಾಟ ಮಾಡುತ್ತಾರೆ. ಈ ವಿಷಯವನ್ನು ಸಾಮಾನ್ಯ ಜನರು ಅರ್ಥಮಾಡಿಕೊಂಡಿದ್ದಾರೆ. ಇದು ಸಾಮಾನ್ಯ ಜನರ ಹೋರಾಟ ಮತ್ತು ಇದು ಕಾರ್ಮಿಕರ ಹೋರಾಟವಾಗಿದೆ" ಎಂದರು.