ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನ ಇಂದಿರಾ ಪಾರ್ಕ್ನಲ್ಲಿ ಆಯೋಜಿಸಲಾದ 'ರೈತ ಮಹಾ ಧರಣಾ'ದಲ್ಲಿ ಭಾಗಿಯಾಗಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, 'ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನಾವು ಬರೆದಿರುವ ಪತ್ರಕ್ಕೆ ಇಲ್ಲಿಯವರೆಗೆ ಉತ್ತರ ನೀಡಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರ ಮಾತನಾಡಲು ಸಿದ್ಧವಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಾವೂ ಪತ್ರ ಸಹ ಬರೆದಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಎಂಎಸ್ಪಿ ವಿಚಾರವಾಗಿ ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸುವುದರಿಂದ ದೇಶದ ಎಲ್ಲ ರೈತರಿಗೆ ಲಾಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಹಿಂದೆ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ' ಎಂದರು.
'ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟ ನಮ್ಮ ಮುಕ್ತಾಯಗೊಂಡಿಲ್ಲ. ನವೆಂಬರ್ 27ರಂದು ಸಂಯುಕ್ತ ಕಿಸಾನ್ ಮೋರ್ಚಾ ಸಭೆ ಇದೆ. ಇದಾದ ಬಳಿಕ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ' ಎಂದರು. ಇದೇ ವೇಳೆ, 'ಜನವರಿ 1ರಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಒಂದು ವೇಳೆ ಅದು ದ್ವಿಗುಣಗೊಂಡರೆ ಹೇಗೆ ಎಂದು ಅವರನ್ನು ಕೇಳುತ್ತೇವೆ?' ಎಂದು ಹೇಳಿದರು.
ಯುಪಿಯಲ್ಲಿ ಬಿಜೆಪಿ ಸೋಲಿಸಲು ನಿರ್ಧಾರ
ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಟಿಕಾಯತ್, 'ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತಹ ಘೋಷವಾಕ್ಯದಡಿ ಪ್ರಚಾರ ನಡೆಸಲಿದ್ದೇವೆ. ಈಗಾಗಲೇ ಉತ್ತರ ಪ್ರದೇಶದ ಕೆಲ ಹಳ್ಳಿಗಳಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ' ಎಂದರು.