ನವದೆಹಲಿ: ಬಾಲಕೋಟ್ ವೈಮಾನಿಕ ದಾಳಿಯ ಎರಡನೇ ವಾರ್ಷಿಕೋತ್ಸವದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ವಾಯುಪಡೆಯ (ಐಎಎಫ್) ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಗೆ ಅಭಿನಂದಿಸಿದ್ದಾರೆ.
ದಾಳಿಯ ಯಶಸ್ಸು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಭಾರತದ ದೃಢ ಇಚ್ಛೆ ತೋರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 14 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಬಳಿಯ ಜಮ್ಮು - ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ಪಿಎಫ್ ಪಡೆಯ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಷ್-ಎ-ಮೊಹಮ್ಮದ್ (ಜೆಎಂ) ದಾಳಿ ನಡೆಸಿ 40 ಸಿಬ್ಬಂದಿಯನ್ನು ಕೊಂದಿತ್ತು. ಇದಕ್ಕೆ ಪ್ರತೀಕಾರ ಎಂಬಂತೆ ಕೆಲವು ದಿನಗಳ ನಂತರ ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೆಎಂ ಶಿಬಿರದ ಮೇಲೆ ಐಎಎಫ್ ವಾಯುದಾಳಿ ನಡೆಸಿತು.
ಫೆಬ್ರವರಿ 26 ರ ಮುಂಜಾನೆ ವಾಯುದಾಳಿ ನಡೆಸಲಾಯಿತು. ಇದಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ಪಡೆ ಗುರಿಯಾಗಿಸಿಕೊಂಡು ಮರುದಿನ ಆಕ್ರಮಣ ನಡೆಸಲು ಮುಂದಾದ ಪಾಕಿಸ್ತಾನದ ಪ್ರಯತ್ನಗಳು ನಮ್ಮ ಯೋಧರ ಕಾರ್ಯಾಚರಣೆಯಿಂದ ವಿಫಲವಾಯಿತು.
ಕಾದಾಟದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರು ಮಿಗ್ -21 ಬೈಸನ್ ಯುದ್ಧ ವಿಮಾನವನ್ನು ಹಾರಿಸುತ್ತಾ ಪಾಕಿಸ್ತಾನಿ ಜೆಟ್‌ಗಳನ್ನು ಬೆನ್ನಟ್ಟುತ್ತಾ ಬಂದರು. ಪಿಒಕೆಗೆ ದಾಟಿದ ಅವರ ವಿಮಾನವನ್ನು ಹೊಡೆದುರುಳಿಸಲಾಯಿತು. ಇದಾದ ನಂತರ ಸೆರೆಸಿಕ್ಕ ಅವರನ್ನು ಮೊದಲು ಪಾಕಿಸ್ತಾನ ವಶಕ್ಕೆ ತೆಗೆದುಕೊಂಡಿತು.