ರಾಜ್‌ಕೋಟ್(ಗುಜರಾತ್): ಕೊರೊನಾ ಮಹಾಮಾರಿ ಮತ್ತೆ ತನ್ನ ಪ್ರತಾಪ ತೋರುತ್ತಿದೆ. ದಿನೇ ದಿನೆ ಸಾವಿನ ಸಂಖ್ಯೆ ಕೂಡಾ ಏರಿಕೆ ಕಾಣುತ್ತಿದೆ. ಈ ಮಧ್ಯೆ ಕೋವಿಡ್ಗೆ ತುತ್ತಾಗಿ ಸತ್ತವರ ಶವ ಸಂಸ್ಕಾರಕ್ಕೆ ತೀರಾ ಅವಸ್ಥೆ ಪಡುವಂತಾಗಿದೆ.
ಹೌದು, ಇದು ಗುಜರಾತ್ ರಾಜ್ಯದ ರಾಜ್‌ಕೋಟ್‌ನ ಪರಿಸ್ಥಿತಿ. ಇಲ್ಲಿ ನಿತ್ಯ ಕಡಿಮೆಯೆಂದರೂ 50ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ದಿನಾಲೂ ಇಷ್ಟೊಂದು ಶವಗಳನ್ನು ಸುಡುವ ಶವಾಗಾರಗಳು ಒಡೆಯಲು ಪ್ರಾರಂಭಿಸಿವೆ. ವಿಪರೀತ ಮೃತದೇಹಗಳನ್ನು ಸುಡುವುದರಿಂದ ಕೆಲವು ಶವಾಗಾರಗಳಲ್ಲಿನ ಕುಲುಮೆಗಳು, ಲೋಹದ ರಚನೆಗಳು ಕರಗುತ್ತಿವೆ.
ದಿನಂಪ್ರತಿಯಂತೆ ಸರತಿ ಸಾಲಿನಲ್ಲಿ ಜನರು ಶವಸಂಸ್ಕಾರಕ್ಕೆ ಬರುತ್ತಿದ್ದು, ಶವಾಗಾರದಲ್ಲಿ ಲೆಕ್ಕಕ್ಕಿಂತ ಹೆಚ್ಚಾಗಿಯೇ ಶವಸಂಸ್ಕಾರವಾಗುತ್ತಿರುವುದು ಇದಕ್ಕೆ ಕಾರಣ. ಅನಿಲ ಕುಲುಮೆಗಳ ಲೋಹದ ಚೌಕಟ್ಟುಗಳ ಮೇಲೆ ದೇಹಗಳನ್ನು ಇಟ್ಟು ಸುಡಲಾಗುತ್ತದೆ. ಅತಿಯಾದ ಬಳಕೆಯಿಂದಾಗಿ ಚಿಮಣಿಗಳು ಕರಗುತ್ತಿವೆ, ಕಟ್ಟೆಗಳು ಒಡೆದು ಹೋಗುತ್ತಿವೆ. ಇನ್ನು ಕೋವಿಡ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಕೊನೆಯ ವಿಧಿ -ವಿಧಾನಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಮೃತ ಕೋವಿಡ್ ರೋಗಿಗಳ ಸಂಬಂಧಿಗಳು ರೋಗಿಯ ಅಂತಿಮ ವಿಧಿ - ವಿಧಾನ ನಡೆಸಲು ದಿನಾಲೂ ಗಂಟೆಗಟ್ಟಲೆ ಕಾಯುವಂತ ಪರಿಸ್ಥಿತಿ ಉಂಟಾಗಿದೆ.
ಗುಜರಾತ್ನಲ್ಲಿ ನಿನ್ನೆ ಮತ್ತೆ 7,410 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,67,616 ಕ್ಕೆ ತಲುಪಿದೆ. 73 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 4,995 ಕ್ಕೆ ತಲುಪಿದೆ.
ಇದನ್ನೂ ಓದಿ: ಪೆರೋಲ್ ಮೇಲೆ ಬಿಡುಗಡೆಯಾದ ತಿಹಾರ್ ಜೈಲಿನ 3,400 ಕೈದಿಗಳು ನಾಪತ್ತೆ