ಜೈಪುರ(ರಾಜಸ್ಥಾನ): ಗ್ರಾಮೀಣ ಪ್ರದೇಶಗಳಲ್ಲಿ ಕಬಡ್ಡಿ ಪಂದ್ಯ ಇಂದಿಗೂ ಸಿಕ್ಕಾಪಟ್ಟೆ ಫೇಮಸ್. ಬಿಡುವಿನ ಸಮಯದಲ್ಲಿ ಕಬಡ್ಡಿ ಆಡುವ ರೂಢಿ ಈಗಲೂ ಇದೆ. ಪ್ರೋ ಕಬಡ್ಡಿ ಲೀಗ್ ಆರಂಭಗೊಂಡ ನಂತರ ಅದರ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಸದ್ಯ ರಾಜಸ್ಥಾನದಲ್ಲಿ ನಡೆದಿರುವ ಕಬಡ್ಡಿ ಪಂದ್ಯವೊಂದು ಭಾರೀ ಪ್ರಸಿದ್ಧಿ ಆಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನದಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ನಡೆಸಲಾಗುತ್ತದೆ. ಅದರಲ್ಲಿ ಬರೋಬ್ಬರಿ 44 ಸಾವಿರ ಹಳ್ಳಿಗಳ ಜನರು ಭಾಗಿಯಾಗುತ್ತಾರೆ. ಬರೋಬ್ಬರಿ ಒಂದು ತಿಂಗಳ ಕಾಲ ನಡೆಯುವ ಈ 'ರಾಜೀವ್ ಗಾಂಧಿ ಗ್ರಾಮೀಣ ಒಲಿಂಪಿಕ್ಸ್'ನಲ್ಲಿ ಹಿರಿಯರು, ಮಹಿಳೆಯರು, ಯುವಕರು ಸಹ ಪಾಲ್ಗೊಳ್ಳುತ್ತಾರೆ. ಈ ಕ್ರೀಡಾಕೂಟದಲ್ಲಿ ಈಗಾಗಲೇ 30 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.
ಗಮನ ಸೆಳೆದ ಕಬಡ್ಡಿ: ಕ್ರೀಡಾಕೂಟದ ಅಂಗವಾಗಿ ಯುವಕರು ಮತ್ತು ಹಿರಿಯರ ನಡುವೆ ಕಬಡ್ಡಿ ಪಂದ್ಯವೊಂದು ನಡೆದಿದೆ. ಇದರ ವಿಡಿಯೋ ತುಣುಕವೊಂದನ್ನು ಅಧಿಕೃತವಾಗಿ ರಾಜಸ್ಥಾನ ಸರ್ಕಾರ ಹಂಚಿಕೊಂಡಿದೆ. ಇದರಲ್ಲಿ ವೃದ್ಧರ ತಂಡ ಎಲ್ಲರೂ ನಾಚುವ ರೀತಿಯಲ್ಲೇ ರೈಡ್ ಮಾಡಿದೆ. ಎದುರಾಳಿ ಯುವಕರ ಕಬಡ್ಡಿ ತಂಡದ ಮೇಲೆ ನುಗ್ಗಿ ಹೋಗಿರುವ ತಾತಂದಿರ ತಂಡ ಇಳಿ ವಯಸ್ಸಿನಲ್ಲೂ ಅಮೋಘವಾಗಿ ಕಬಡ್ಡಿ ಆಡುವ ಮೂಲಕ ಕಮಾಲ್ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದ ಜನರಲ್ಲಿ ಸಾಂಪ್ರದಾಯಿಕ ಆಟದ ಮೂಲಕ ಸಾಮರಸ್ಯ ಹೆಚ್ಚಿಸುವ ಉದ್ದೇಶದಿಂದ ಈ ಕ್ರೀಡಾಕೂಟ ನಡೆಸಲಾಗ್ತದೆ. 30 ಲಕ್ಷ ಜನರು ಈ ಕ್ರೀಡೆಗೋಸ್ಕರ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 9 ಲಕ್ಷ ಮಹಿಳೆಯರು ಇರುವುದು ವಿಶೇಷ ಎನಿಸಿದೆ.
ಇದನ್ನೂ ಓದಿ: ಮಹಾಶಿವರಾತ್ರಿ: ಕ್ರೀಡಾಪಟುಗಳೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ
ಈ ಕ್ರೀಡಾಕೂಟದಲ್ಲಿ ವಾಲಿಬಾಲ್, ಹಾಕಿ, ಟೆನ್ನಿಸ್ ಬಾಲ್ ಕ್ರಿಕೆಟ್, ಖೋ ಖೋ, ಕಬಡ್ಡಿ ಸೇರಿ ವಿವಿಧ ಗ್ರಾಮೀಣ ಆಟಗಳನ್ನು ಆಡಿಸಲಾಗ್ತದೆ. ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿರುವ ಸಿಎಂ ಅಶೋಕ್ ಗೆಹ್ಲೋಟ್, ನಮ್ಮದು 135 ಕೋಟಿ ಜನರು ಇರುವ ಬಲಿಷ್ಠ ದೇಶ. ಕ್ರೀಡೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜನೆ ಮಾಡಲಾಗ್ತಿದೆ. ಜೊತೆಗೆ ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ಈ ಮೂಲಕ ಗುರುತಿಸಲಾಗುತ್ತಿದೆ ಎಂದು ಹೇಳಿದ್ದಾರೆ.