ಚೆನ್ನೈ (ತಮಿಳುನಾಡು): ಸೂಪರ್ಸ್ಟಾರ್ ರಜಿನಿಕಾಂತ್ ತಮ್ಮ ನಿರ್ಧಾರವನ್ನು ಬದಲಿಸಿ ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದ ಅವರ ಅಭಿಮಾನಿಗಳು ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಅನಾರೋಗ್ಯಕ್ಕೊಳಗಾಗಿ, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ರಜಿನಿ, ತಾವು ರಾಜಕೀಯಕ್ಕೆ ಪದಾರ್ಪಣೆ ಮಾಡುವುದಿಲ್ಲ ಎಂದು ಡಿಸೆಂಬರ್ 28ರಂದು ಘೋಷಿಸಿದ್ದರು.
2021ರ ಜನವರಿಯಲ್ಲಿ ರಾಜಕೀಯ ಪಕ್ಷ ಘೋಷಿಸುವುದಾಗಿ ಹೇಳಿದ್ದ ತಲೈವಾ, ಅನಾರೋಗ್ಯದ ದೃಷ್ಟಿಯಿಂದ ತಮ್ಮ ನಿರ್ಧಾರ ಹಿಂದೆತೆಗೆದುಕೊಂಡಿದ್ದರಿಂದ ಅಭಿಮಾನಿಗಳು ನಿರಾಶೆಗೊಂಡಿದ್ದರು. ಅಭಿಮಾನಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಕೂಡ ಯತ್ನಿಸಿದ್ದನು.
ಇದನ್ನೂ ಓದಿ: ರಜಿನಿಕಾಂತ್ ರಾಜಕೀಯಕ್ಕೆ ಬರುವಂತೆ ಒತ್ತಾಯಿಸಿ ಬೆಂಕಿ ಹಚ್ಚಿಕೊಳ್ಳಲು ಮುಂದಾದ ಅಭಿಮಾನಿ
ಇಂದು ವಳ್ಳುವರ್ ಕೊಟ್ಟಂನಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿದ್ದ ರಜಿನಿಕಾಂತ್ ಫ್ಯಾನ್ಸ್ ಕ್ಲಬ್ ಸದಸ್ಯರು, ರಜಿನಿ ಸಿನಿಮಾ ಡೈಲಾಗ್ಗಳನ್ನು ಹೇಳುತ್ತಾ, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಪ್ರತಿಭಟನೆ ನಡೆಸಿದ್ದಾರೆ.
ರಜಿನಿಕಾಂತ್ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ. ಅವರಿಗೆ ರಾಜಕೀಯದಲ್ಲಿ ಬದಲಾವಣೆ ತರುವ ಸಾಮರ್ಥ್ಯವಿದೆ. ಹೀಗಾಗಿ ಅವರ ನಿರ್ಧಾರವನ್ನು ಮರುಪರಿಶೀಲಿಸಿ ರಾಜಕೀಯಕ್ಕೆ ಎಂಟ್ರಿ ಕೊಡಬೇಕೆಂದು ತಮ್ಮ ನೆಚ್ಚಿನ ನಟನಲ್ಲಿ ಮನವಿ ಮಾಡಿದ್ದಾರೆ.