ಜೈಪುರ (ರಾಜಸ್ಥಾನ): ಅವಳಿ ಮಕ್ಕಳು ಜನಿಸುವುದು ಕಾಮನ್, ಇನ್ನೂ ಕೆಲವು ಮಹಿಳೆಯರು ತ್ರಿವಳಿ ಮಕ್ಕಳಿಗೂ ಜನ್ಮ ನೀಡಿರುವ ಉದಾಹರಣೆಗಳಿವೆ. ಆದರೆ, ಏಕಕಾಲದಲ್ಲಿ ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ತೀರಾ ವಿರಳ ಮತ್ತು ಅಪರೂಪ. ಇಂತಹದ್ದೊಂದು ಅಪರೂಪದ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ.
ವಜೀರ್‌ಪುರದ ಮಹಿಳೆ ಕಿರಣ್ ಕನ್ವರ್ (28) ಭಾನುವಾರ ಬೆಳಗ್ಗೆ ಎರಡು ಗಂಡು ಮತ್ತು ಎರಡು ಹೆಣ್ಣು ಸೇರಿ ಒಟ್ಟು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಲಾಗಿದೆ. ತಾಯಿ ಸೇರಿದಂತೆ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
''ಮೂರು ನವಜಾತ ಶಿಶುಗಳ ತೂಕ 1 ಕೆಜಿ 350 ಗ್ರಾಂ ಆಗಿದ್ದರೆ, ನಾಲ್ಕನೆಯ ಮಗುವಿನ ತೂಕ 1 ಕೆಜಿ 650 ಗ್ರಾಂ ಇದೆ. ಮೂರು ಮಕ್ಕಳಿಗೆ ವಿಶೇಷ ನಿಗಾ ಅಗತ್ಯವಿದೆ. ಹಾಗಾಗಿ ಸದ್ಯ 1 ಕೆಜಿ 350 ಗ್ರಾಂ ತೂಕದ ಮೂರು ಮಕ್ಕಳನ್ನು ಝನಾನಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಒಂದು ಮಗು ಮಾತ್ರ ತಾಯಿ ಬಳಿಯೇ ಇದೆ'' ಎಂದು ಆಸ್ಪತ್ರೆಯ ಡಾ.ಶಾಲಿನಿ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
''ಕಿರಣ್ ಕನ್ವರ್ಗೆ ಸುಮಾರು 5 ವರ್ಷಗಳ ಹಿಂದೆ ಮದುವೆಯಾಗಿತ್ತು. ವೈದ್ಯಕೀಯ ಸಮಸ್ಯೆಯಿಂದಾಗಿ ಅವರು ಮಕ್ಕಳನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಆದರೆ, ಕಿರಣ್ ಚಿಕಿತ್ಸೆಗಾಗಿ ಕೆಲವು ತಿಂಗಳ ಹಿಂದೆಯಷ್ಟೇ ಟೋಂಕ್ ಜೈಲ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದಿದ್ದರು. ಚಿಕಿತ್ಸೆಯ ನಂತರ, ಮಹಿಳೆ ಗರ್ಭಿಣಿಯಾಗಿದ್ದು, ಸೋನೋಗ್ರಫಿ ಮೂಲಕ ನೋಡಿದಾಗ ಆಕೆಯ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಕಂಡು ಬಂದಿತ್ತು. ಅಂದಿನಿಂದ, ಮಹಿಳೆ ನಿರಂತರ ವೈದ್ಯರ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ ಆಗಾಗ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು’’.
''ಶನಿವಾರ ರಾತ್ರಿ ಮಹಿಳೆಗೆ ಹಠಾತ್ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆತಂದಿದ್ದರು. ಆಗ ಗರ್ಭಿಣಿಯನ್ನು ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೆರಿಗೆ ಮಾಡಿಸಲಾಗಿದೆ. ಮದುವೆಯಾದ ಐದು ವರ್ಷಗಳ ನಂತರ ನಾಲ್ಕು ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ್ದು ನಮಗೂ ಅಚ್ಚರಿ ಅನ್ನಿಸಿದೆ. ಮಕ್ಕಳ ಆಸೆಯನ್ನೇ ಬಿಟ್ಟಿದ್ದ ತಾಯಿ ಕಿರಣ್ ಕನ್ವರ್, ತಂದೆ ಮೋಹನ್ ಸಿಂಗ್ ಸೇರಿದಂತೆ ಇಡಿ ಕುಟುಂಬ ಸದ್ಯ ಖುಷಿ ಘಳಿಗೆಯಲ್ಲಿದೆ'' ಎಂದು ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವಿಚಿತ್ರ ಮಗು: ಒಂದೇ ದೇಹದಲ್ಲಿ ಎರಡು ಹೃದಯ, ನಾಲ್ಕು ಕೈ ಕಾಲು
ನಾಲ್ಕು ಕೈ ಕಾಲುಗಳಿರುವ ವಿಚಿತ್ರ ಮಗು ಜನನ: ರಾಜಸ್ಥಾನದ ಚುರು ಪ್ರದೇಶದ ರತನ್‌ಗಢದ ಗಂಗಾರಾಮ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ನಾಲ್ಕು ಕೈ ಕಾಲುಗಳಿರುವ ವಿಚಿತ್ರ ಮಗುವೊಂದು ಜನಿಸಿರುವ ಬಗ್ಗೆ ವರದಿಯಾಗಿತ್ತು. ನಾಲ್ಕು ಕೈಗಳು, ನಾಲ್ಕು ಕಾಲುಗಳು ಇರುವ ದೇಹ ಅಂಟಿಕೊಂಡಂತೆ ಜನಿಸಿರುವ ಹೆಣ್ಣು ಮಗು ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿತ್ತು. ಆಸ್ಪತ್ರೆಯ ವೈದ್ಯರು ವಿಚಿತ್ರ ಮಗುವನ್ನು ಹೊಟ್ಟೆಯಲ್ಲಿ ಹೊತ್ತು ಬಂದಿದ್ದ ತಾಯಿಗೆ ಸಾಮಾನ್ಯ ಹೆರಿಗೆ ಮಾಡಿಸಿದ್ದರು. ಆದರೆ, ಮಗು ಹುಟ್ಟಿದ 20 ನಿಮಿಷಕ್ಕೆ ಸಾವನ್ನಪ್ಪಿತ್ತು. ತಾಯಿ ಆರೋಗ್ಯವಾಗಿದ್ದು, ಈ ಘಟನೆ ಸ್ಥಳೀಯ ಜನರಲ್ಲಿ ಮಾತ್ರವಲ್ಲದೇ ರಾಜ್ಯದೆಲ್ಲೆಡೆ ಅಚ್ಚರಿ ಮೂಡಿಸಿತ್ತು.