ಜೈಪುರ (ರಾಜಸ್ಥಾನ): ತೆರಿಗೆ ವಂಚನೆ ಆರೋಪ ಪ್ರಕರಣದ ಸಂಬಂಧ ವಿವೋ ಕಂಪನಿಯ ರಾಜಸ್ಥಾನದ ಹಣಕಾಸು ಮುಖ್ಯಸ್ಥ ಕ್ವಾನ್ ಲಿ ಅವರನ್ನು ಜೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳ ತಂಡವು ಬಂಧಿಸಿದೆ. ಅಲ್ಲದೇ, ಬಂಧಿತ ಕ್ವಾನ್ ಲಿ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ವಲಸೆ ಅಧಿಕಾರಿಗಳು ಒಪ್ಪಿಸಿದ್ದಾರೆ.
ಚೀನಾದ ಮೊಬೈಲ್ ಫೋನ್ ತಯಾರಿಕಾ ಕಂಪನಿಯಾದ ವಿವೋದ ರಾಜಸ್ಥಾನದ ಹಣಕಾಸು ಮುಖ್ಯಸ್ಥರಾದ ಕ್ವಾನ್ ಲಿ ವಿರುದ್ಧ ಜಾರಿ ನಿರ್ದೇಶನಾಲಯವು ತೆರಿಗೆ ವಂಚನೆ ಮತ್ತು ಹಣ ದುರುಪಯೋಗದ ಕುರಿತ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲದೇ, ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿತ್ತು.
ಆದರೆ, ಬುಧವಾರ ರಾತ್ರಿ ಜೈಪುರದಿಂದ ಏರ್ಏಷ್ಯಾ ವಿಮಾನದಲ್ಲಿ ಕ್ವಾನ್ ಲಿ ಬ್ಯಾಂಕಾಕ್‌ಗೆ ಹಾರಲು ಮುಂದಾಗಿದ್ದರು. ಈ ವೇಳೆ, ವಿಮಾನ ನಿಲ್ದಾಣದ ವಲಸೆ ವಿಭಾಗವು ಕ್ವಾನ್ ಲಿ ಅವರನ್ನು ಬಂಧಿಸಿದೆ. ಈಗಾಗಲೇ ವಿವೋ ಕಂಪನಿಯ ಹಲವು ಅಧಿಕಾರಿಗಳು ದೇಶ ತೊರೆದಿದ್ದಾರೆ.
ಇನ್ನು, ವಿವೋ ಕಂಪನಿಯು ತೆರಿಗೆ ವಂಚನೆ ಮತ್ತು ಹಣ ದುರುಪಯೋಗ ಮಾತ್ರವಲ್ಲದೇ ವಿದೇಶಕ್ಕೆ ಹಣ ರವಾನೆ ಮಾಡಿದ ಆರೋಪವನ್ನೂ ಎದುರಿಸುತ್ತಿದೆ. ಈ ಸಂಬಂಧ ರಾಜಸ್ಥಾನ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವಿವೋ ಕಂಪನಿಯ ಸುಮಾರು 44 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ: SSC Recruitment Scam: ಪಶ್ಚಿಮ ಬಂಗಾಳ ಸಚಿವ ಸಂಪುಟದಿಂದ ಪಾರ್ಥ ಚಟರ್ಜಿ ವಜಾ