ಜೈಪುರ (ರಾಜಸ್ಥಾನ) : ಇಲ್ಲಿನ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ ಹೆಣ್ಣು ಹುಲಿ ಮರಿಗೆ ಪ್ಯಾರಾಲಿಂಪಿಕ್ ಪದಕ ವಿಜೇತೆ ಅವನಿ ಲೇಖರಾ ಅವರ ಹೆಸರನ್ನು ಇಡಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ತಿಳಿಸಿದ್ದಾರೆ. ಒಟ್ಟು ಮೂರು ಮರಿಗಳಿಗೆ ನಾಮಕರಣ ಮಾಡಲಾಗಿದ್ದು, ಇನ್ನೆರಡು ಮರಿಗಳಿಗೆ 'ಚಿರಂಜೀವಿ' ಮತ್ತು 'ಚಿರಾಯು' ಎಂದು ಹೆಸರಿಡಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಗೆಹ್ಲೋಟ್, "ಐತಿಹಾಸಿಕ ಅಂತಾರಾಷ್ಟ್ರೀಯ ಹುಲಿ ದಿನ ಆಚರಣೆಯ ಅಂಗವಾಗಿ ರಣಥಂಬೋರ್‌ನ ಹುಲಿ T-111ನ ಮೂರು ಮರಿಗಳಿಗೆ (ಎರಡು ಗಂಡು ಮತ್ತು ಒಂದು ಹೆಣ್ಣು ಹುಲಿ) 'ಚಿರಂಜೀವಿ', 'ಚಿರಾಯು' ಮತ್ತು 'ಅವನಿ' ಎಂದು ಹೆಸರಿಸಲಾಗಿದೆ. ಈ ಹಿಂದೆ 2010ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆ ಕೃಷ್ಣ ಪೂನಿಯಾ ಅವರ ಸಾಧನೆಯನ್ನು ಗಮನಿಸಿ ಟೈಗ್ರೆಸ್ ಟಿ-17 ಹುಲಿಗೆ ಕೃಷ್ಣ ಎಂದು ಹೆಸರಿಡಲಾಗಿತ್ತು. ಅದೇ ರೀತಿ ಈಗ ಪ್ಯಾರಾಲಿಂಪಿಕ್ ಪದಕ ವಿಜೇತೆ ಅವನಿ ಲೇಖರಾ ಅವರ ಹೆಸರನ್ನು ಹೆಣ್ಣು ಮರಿಗೆ ಇಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹುಲಿ ಗಣತಿ: ಭಾರತದಲ್ಲಿವೆ 3 ಸಾವಿರಕ್ಕೂ ಹೆಚ್ಚು ಹುಲಿಗಳು.. ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ , ಕರ್ನಾಟಕಕ್ಕೆ ಎರಡನೇ ಸ್ಥಾನದ ಪಟ್ಟ!
ಜೈಪುರಕ್ಕೆ ಸೇರಿದ ಅವನಿ ಲೇಖರಾ ಅವರು ಟೋಕಿಯೊ 2020 ಪ್ಯಾರಾಲಿಂಪಿಕ್ಸ್‌ನಲ್ಲಿ 10-ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ ಮತ್ತು 50 ಮೀಟರ್ ರೈಫಲ್ನಲ್ಲಿ 3ನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ.
"ದೇಶದಲ್ಲಿ ಹುಲಿಗಳು ವಿನಾಶದ ಅಂಚಿನಲ್ಲಿದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1973ರ ಏಪ್ರಿಲ್‌ನಲ್ಲಿ 'ಪ್ರಾಜೆಕ್ಟ್ ಟೈಗರ್' ಪ್ರಾರಂಭಿಸಿದರು. ಇದು ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುವುದಕ್ಕೆ ಕಾರಣವಾಯಿತು. ಕಳೆದ ಒಂದು ತಿಂಗಳಲ್ಲಿ ರಾಜಸ್ಥಾನದ ರಣಥಂಬೋರ್ನಲ್ಲಿ ಆರು ಮರಿಗಳು ಜನಿಸಿದ್ದು, ರಾಜಸ್ಥಾನ ಸರ್ಕಾರವು ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ಬದ್ಧತೆಯಿಂದ ಕೆಲಸ ಮಾಡುತ್ತಿದೆ" ಎಂದು ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಹುಲಿ ದಿನ: ಹುಲಿಗಳ ಗಣತಿ ಬಿಡುಗಡೆ.. ಬಂಡೀಪುರಕ್ಕೆ ದೇಶದಲ್ಲೇ 2ನೇ, ಕರ್ನಾಟಕದಲ್ಲಿ 1ನೇ ಸ್ಥಾನ
ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಹುಲಿ ಗಣತಿ 2022ರ ರಾಜ್ಯವಾರು ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಆ ಪ್ರಕಾರ, ಭಾರತದಲ್ಲಿ 3,167 ಹುಲಿಗಳಿವೆ. 563 ಹುಲಿಗಳನ್ನು ಹೊಂದಿರುವ ಕರ್ನಾಟಕವು ಮಧ್ಯಪ್ರದೇಶದ ನಂತರ 2ನೇ ಸ್ಥಾನದಲ್ಲಿದೆ. ಉತ್ತರಾಖಂಡದಲ್ಲಿ 560 ಮತ್ತು ಮಹಾರಾಷ್ಟ್ರದಲ್ಲಿ 444 ಹುಲಿಗಳಿವೆ. ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ : Project Tiger: ವಿಶ್ವದ ಶೇ. 70ರಷ್ಟು ಹುಲಿಗಳು ಭಾರತದಲ್ಲಿವೆ; 'ಹುಲಿ ಯೋಜನೆ' ಶ್ಲಾಘಿಸಿದ ಪ್ರಧಾನಿ ಮೋದಿ