ಜೈಪುರ (ರಾಜಸ್ಥಾನ): ರಾಜಸ್ಥಾನ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ವಿಶೇಷ ಯೋಜನೆಯನ್ನು ತಂದಿದೆ. ಸಮುದಾಯದ ಜನರು ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷೆಗಳನ್ನು ಕಲಿಯಲು ಇಚ್ಚಿಸಿದಲ್ಲಿ ಅವರಿಗೆ ಮಾಸಿಕವಾಗಿ 1500 ರೂಪಾಯಿ ಭತ್ಯೆ ನೀಡುವುದಾಗಿ ಹೇಳಿದೆ. ಸರ್ಕಾರದಿಂದಲೇ ಭಾಷಾ ಕಲಿಕೆ ಹೇಳಿಕೊಡಲಾಗುತ್ತದೆಯೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಈ ಬಗ್ಗೆ ಮಾಹಿತಿ ನೀಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲೇಹ್ ಮೊಹಮ್ಮದ್, ರಾಜಸ್ಥಾನ ಜ್ಞಾನ ನಿಗಮದ ಸಹಭಾಗಿತ್ವದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯು ಪ್ರಾರಂಭಿಸಿರುವ ಮುಖ್ಯಮಂತ್ರಿ ಅಲ್ಪಸಂಖ್ಯಾತ ಭಾಷಾ ದಕ್ಷತೆ ಮತ್ತು ಸಂವಹನ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೊದಲ ಹಂತದಲ್ಲಿ 800 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ಬಳಿಕ ಈ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು ಎಂದು ತಿಳಿಸಿದರು.
ಭಾಷಾ ಕಲಿಕೆಗಾಗಿ ಅಭ್ಯರ್ಥಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಏಪ್ರಿಲ್ 10 ರಿಂದ ಏಪ್ರಿಲ್ 25 ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಪ್ರಯತ್ನಿಸಲಾಗುತ್ತದೆ. ಸಮುದಾಯದ ಯುವಕರು ವಿವಿಧ ಭಾಷೆಗಳ ಜ್ಞಾನ ಹೊಂದಿದ್ದರೆ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂಬುದು ಯೋಜನೆಯ ಉದ್ದೇಶವಾಗಿದೆ ಎಂದರು.
ಯಾವೆಲ್ಲಾ ಭಾಷೆ ಕಲಿಕೆ?: ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಇಂಗ್ಲಿಷ್, ಫ್ರೆಂಚ್, ಜರ್ಮನ್, ಅರೇಬಿಕ್, ಪರ್ಷಿಯನ್, ಸ್ಪ್ಯಾನಿಷ್, ಚೈನೀಸ್ ಮತ್ತು ಜಪಾನೀಸ್ ಭಾಷೆಗಳನ್ನು ಕಲಿಸಲಾಗುತ್ತದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಮೊದಲ ಹಂತದಲ್ಲಿ ಈ ಯೋಜನೆಯಡಿ ಇಷ್ಟು ಭಾಷೆಗಳನ್ನು ಅಧ್ಯಯನ ಮಾಡಲು ಒಟ್ಟು 800 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಆಯ್ಕೆಯಾದ ಮಕ್ಕಳಿಗೆ ಸರ್ಕಾರವೇ ಮಾಸಿಕವಾಗಿ 1500 ರೂ.ಗಳನ್ನು ನೀಡಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಯೋಜನವನ್ನು ಮುಸ್ಲಿಂ ಸಮುದಾಯದ ಯುವಕರಿಗೆ ಮಾತ್ರ ಸೀಮಿತಗೊಳಿಸಲಾಗಿಲ್ಲ. ರಾಜ್ಯದ ಅಲ್ಪಸಂಖ್ಯಾತ ವಿಭಾಗದ ಮಾನದಂಡದ ಅಡಿಯಲ್ಲಿ ಬರುವ ಜೈನ್, ಸಿಖ್, ಕ್ರಿಶ್ಚಿಯನ್ ಮತ್ತು ಬೌದ್ಧ ಸಮುದಾಯಗಳ ಯುವಕರೂ ಸಹ ಕೋರ್ಸ್‌ಗೆ ದಾಖಲಾಗಬಹುದು ಎಂದು ಸಚಿವರು ತಿಳಿಸಿದರು.
ಅರ್ಹ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕೋರ್ಸ್‌ಗೆ ದಾಖಲಾಗಲು 18 ರಿಂದ 45 ರ ನಡುವಿನ ವಯಸ್ಸಿನವರಾಗಿರಬೇಕು. ಪ್ರಸ್ತುತ ಯೋಜನೆಗೆ 2 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ 800 ಅಭ್ಯರ್ಥಿಗಳನ್ನು ಕೋರ್ಸ್‌ಗೆ ದಾಖಲಿಸಲಾಗುವುದು. ಆಸಕ್ತರ ಸಂಖ್ಯೆ ಹೆಚ್ಚಾದಂತೆ, ನಂತರ ಅನುದಾಣ ಮತ್ತು ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಗ್ಯಾರಂಟಿ: ರಾಜ್ಯದಲ್ಲಿ ಪದವಿ, ಡಿಪ್ಲೋಮಾ ವ್ಯಾಸಂಗ ಮಾಡಿ ಉದ್ಯೋಗವಿಲ್ಲದ ಯುವಕ, ಯುವಕರಿಗೆ ಯುವ ನಿಧಿಯಡಿ ಪ್ರತಿ ತಿಂಗಳು ಭತ್ಯೆ ನೀಡಲಾಗುವುದು. ಇದರಲ್ಲಿ ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ವ್ಯಾಸಂಗ ಮಾಡಿದವರಿಗೆ 1500 ರೂಪಾಯಿ ಭತ್ಯೆ ಸಿಗಲಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಗ್ಯಾರಂಟಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ 4ನೇ ಗ್ಯಾರಂಟಿ ಘೋಷಣೆ: ನಿರುದ್ಯೋಗ ಯುವಕ, ಯುವತಿಯರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ