ಜೈಪುರ (ರಾಜಸ್ಥಾನ): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಅಂತಿಮ ಘಟ್ಟಕ್ಕೆ ತಲುಪಿವೆ. ಈಗಾಗಲೇ, ಮಿಜೋರಾಂ, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದಲ್ಲಿ ಮತದಾನ ಪೂರ್ಣಗೊಂಡಿದೆ. ನಾಳೆ, ನವೆಂಬರ್ 25ರಂದು ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜ್ಯದ ಒಟ್ಟು 200 ವಿಧಾನಸಭಾ ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಶನಿವಾರ ಮತದಾನ ಜರುಗಲಿದೆ. ಶ್ರೀಗಂಗಾನಗರ ಜಿಲ್ಲೆಯ ಕರಣಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕುನ್ನಾರ್ ನಿಧನದ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆ ಮುಂದೂಡಲಾಗಿದೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ಕ್ಕೆ ಮತದಾನ ಆರಂಭವಾಗಿ ಸಂಜೆ 6ರವರೆಗೆ ನಡೆಯಲಿದೆ. ರಾಜ್ಯದ 5 ಕೋಟಿಗೂ ಹೆಚ್ಚು ಮತದಾರರು 1,862 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಈಗಾಗಲೇ ಮತದಾನಕ್ಕೆ ಸಂಬಂಧಿಸಿದ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿದೆ. ರಾಜ್ಯದಲ್ಲಿ ಒಟ್ಟಾರೆ 51,507 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 5 ಕೋಟಿ 26 ಲಕ್ಷದ 90 ಸಾವಿರದ 146 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಬಿಗಿ ಭದ್ರತೆ ಏರ್ಪಡಿಸಲಾಗಿದೆ.
1.5 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು, ನೌಕರರು, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕರು, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್, ಎಸ್‌ಎಸ್‌ಬಿ, ಆರ್‌ಪಿಎಫ್ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಉತ್ತರ ಪ್ರದೇಶ, ಗುಜರಾತ್, ಹರಿಯಾಣ ಮತ್ತು ಮಧ್ಯಪ್ರದೇಶದ ಗೃಹ ರಕ್ಷಕರನ್ನು ಸಹ ಚುನಾವಣಾ ಕರ್ತವ್ಯಕ್ಕೆ ಬಳಸಲಾಗಿದೆ. ಅಲ್ಲದೇ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ 4,850 ಕಿಮೀ ಉದ್ದದ ಅಂತರರಾಜ್ಯ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ಅನಗತ್ಯ ಹೊರಗಿನವರ ಪ್ರವೇಶವನ್ನು ತಡೆಯುವ ಉದ್ದೇಶದಿಂದ ತಪಾಸಣೆ ಕ್ರಮ ಕೈಗೊಳ್ಳಲಾಗುತ್ತದೆ.
1.70 ಕೋಟಿ ಯುವ ಮತದಾರರು: 199 ವಿಧಾನಸಭಾ ಸ್ಥಾನಗಳಲ್ಲಿ 5.26 ಕೋಟಿ ಮತದಾರರ ಪೈಕಿ 18ರಿಂದ 30 ವರ್ಷದೊಳಗಿನ 1 ಕೋಟಿ 70 ಲಕ್ಷ 99 ಸಾವಿರದ 334 ಯುವ ಮತದಾರರಿದ್ದಾರೆ. ಇದರಲ್ಲಿ 18ರಿಂದ 19 ವರ್ಷದೊಳಗಿನ 22.61 ಲಕ್ಷ ಹೊಸ ಮತದಾರರು ಸೇರಿದ್ದಾರೆ. ನಗರ ಪ್ರದೇಶದಲ್ಲಿ 10,501 ಹಾಗೂ ಗ್ರಾಮೀಣ ಪ್ರದೇಶದಲ್ಲಿ 41,006 ಮತಗಟ್ಟೆಗಳನ್ನು ಮಾಡಲಾಗಿದೆ. 26,393 ಮತಗಟ್ಟೆಗಳಲ್ಲಿ ಲೈವ್ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.
ರಾಜ್ಯದಾದ್ಯಂತ 65,277 ಬ್ಯಾಲೆಟ್ ಯೂನಿಟ್, 62,372 ಕಂಟ್ರೋಲ್ ಯೂನಿಟ್ ಮತ್ತು ಮೀಸಲು ಯಂತ್ರಗಳು ಸೇರಿದಂತೆ 67,580 ವಿವಿಪ್ಯಾಟ್ ಯಂತ್ರಗಳನ್ನು ಮತದಾನಕ್ಕೆ ಬಳಸಲಾಗುವುದು. ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ವಿಧಾನಸಭಾ ಚುನಾವಣೆ ನಡೆಸಲು 6,287 ಮೈಕ್ರೋ ವೀಕ್ಷಕರು ಹಾಗೂ 6247 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪ್ರವೀಣ್ ಗುಪ್ತಾ ಮಾಹಿತಿ ನೀಡಿದ್ದಾರೆ.
2 ಲಕ್ಷಕ್ಕೂ ಅಧಿಕ ಮತಗಟ್ಟೆ ಸಿಬ್ಬಂದಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 2,74,846 ಮತಗಟ್ಟೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 7,960 ಮಹಿಳಾ ಸಿಬ್ಬಂದಿ, 796 ವಿಶೇಷಚೇತನ ಸಿಬ್ಬಂದಿ ಇದ್ದಾರೆ. ವಿಶೇಷಚೇತನರ ನಿರ್ವಹಣಾ ಮತಗಟ್ಟೆಗಳಲ್ಲಿ ಮತದಾನಕ್ಕೆ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.
ಮತದಾರ ಹೆಚ್ಚಿಸಲು ಚುನಾವಣಾ ಆಯೋಗ ವಿಶಿಷ್ಟ ಉಪಕ್ರಮ ಕೈಗೊಂಡಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಸಿಬ್ಬಂದಿ ಮತಗಟ್ಟೆ ಕೇಂದ್ರಗಳು, ಅಂಗವಿಕಲರ ಮತಗಟ್ಟೆ ಕೇಂದ್ರಗಳು ಹಾಗೂ ಯುವ ಸಿಬ್ಬಂದಿ ನಿರ್ವಹಣೆಯ ಮತಗಟ್ಟೆ ಕೇಂದ್ರಗಳನ್ನು ರಚಿಸಲಾಗಿದೆ. ಇಂತಹ 3383 ವಿಶೇಷ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಅಂಗವಿಕಲ ಮತಗಟ್ಟೆ, ಎಂಟು ಮಹಿಳಾ ಮತ್ತು ಯುವ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಓರ್ವ ನಟ; ಚುನಾವಣೆಯ ನಂತರ ಬಿಜೆಪಿಯವರಿಗೆ ಮುಖ ತೋರಿಸಲು ಆಗಲ್ಲ-ಗೆಹ್ಲೋಟ್