ಜೈಪುರ (ರಾಜಸ್ಥಾನ): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಹಿಳೆಯರ ಗುಂಪಿನೊಂದಿಗೆ ಸಾರ್ವಜನಿಕ ಸಂವಾದ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮೈಕ್ ಸರಿಯಾಗಿ ಕೆಲಸ ಮಾಡಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಅವರು ಅದನ್ನು ನೆಲಕ್ಕೆಸೆದರು. ಈ ಘಟನೆ ಶುಕ್ರವಾರ ಬಾರ್ಮರ್ನಲ್ಲಿ ನಡೆಯಿತು. ಸಿಎಂ ಮೈಕ್ ನೆಲಕ್ಕೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿಎಂ ಗೆಹ್ಲೋಟ್ ಬಾರ್ಮರ್ನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಶುಕ್ರವಾರ ರಾತ್ರಿ (ಜೂನ್ 2) ಬಾರ್ಮರ್ ಸರ್ಕ್ಯೂಟ್ ಹೌಸ್‌ನಲ್ಲಿ ಮಹಿಳೆಯರ ಅಹವಾಲು ಸ್ವೀಕರಿಸುಲ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿ ಮುಖ್ಯಮಂತ್ರಿಗಳು ಮಹಿಳೆಯರಿಗೆ ಒದಗಿಸಲಾದ ವಿವಿಧ ಯೋಜನೆಗಳ ಸವಲತ್ತುಗಳ ಕುರಿತು ಮಾಹಿತಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಯುವತಿ ತನ್ನ ಅಭಿಪ್ರಾಯ ಹಂಚಿಕೊಂಡರು. ಇದಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಲು ಮುಂದಾದಾಗ ಮೈಕ್ ಕೆಲಸ ಮಾಡಲಿಲ್ಲ.
ಇದನ್ನೂ ಓದಿ: ರಾಜಸ್ಥಾನದಲ್ಲೂ ಕರ್ನಾಟಕದ ಪ್ರಯೋಗ: ಗೆಹ್ಲೋಟ್ ಸರ್ಕಾರದಿಂದ ಪ್ರತಿ ಮನೆಗೆ 100 ಯೂನಿಟ್ ವಿದ್ಯುತ್ ಫ್ರೀ!
ಇದರಿಂದ ಕೋಪಗೊಂಡ ಗೆಹ್ಲೋಟ್ ತಮ್ಮ ಎಡಭಾಗಕ್ಕೆ ಮೈಕ್ ಎಸೆದುಬಿಟ್ಟರು. ಹೀಗೆ ಮೈಕ್ ಎಸೆದ ಎಡಭಾಗಕ್ಕೆ ಜಿಲ್ಲಾಧಿಕಾರಿ ನಿಂತಿದ್ದು ಅವರ ಮೇಲೆ ಎಸೆದಂತೆಯೇ ಭಾಸವಾಯಿತು. ತಕ್ಷಣವೇ ಜಿಲ್ಲಾಧಿಕಾರಿ ಆ ಮೈಕ್ ತೆಗೆದುಕೊಂಡರು. ಬಳಿಕ ಮುಖ್ಯಮಂತ್ರಿ ಮುಂಭಾಗ ಕುಳಿತಿದ್ದ ಮಹಿಳೆಯೊಬ್ಬರು ತನ್ನ ಮೈಕ್ ನೀಡಿದರು. ಈ ಮೂಲಕ ಮತ್ತೆ ಸಂವಾದ ಕಾರ್ಯಕ್ರಮ ಮುಂದುವರೆಯಿತು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮೇಲೆಯೇ ಮೈಕ್ ಎಸೆದರು ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಕಚೇರಿ ಜಿಲ್ಲಾಧಿಕಾರಿ ಮೇಲೆ ಮೈಕ್ ಎಸೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದೇ ವೇಳೆ, ಮಹಿಳೆಯೊಂದಿಗೆ ಮಾತನಾಡುತ್ತಿದ್ದಾಗ ಆಕೆಯ ಹಿಂದೆ ಅನವಶ್ಯಕ ಜನಸಂದಣಿ ನಿಂತಿದ್ದನ್ನು ಕಂಡು ಗರಂ ಆದ ಸಿಎಂ, ಮಹಿಳೆಯ ಹಿಂದೆ ನಿಂತಿರುವ ಜನರಲ್ಲಿ ನೀವು ಯಾರು?, ಯಾಕೆ ನಿಂತಿದ್ದೀರಿ? ಎಸ್ಪಿ ಎಲ್ಲಿದ್ದಾರೆ? ಎಸ್ಪಿ, ಕಲೆಕ್ಟರ್ ಇಬ್ಬರೂ ಒಂದೇ ರೀತಿ ಕಾಣುತ್ತಿದ್ದಾರೆ ಎಂದು ಗದರಿದರು. ಸಂವಾದ ಕಾರ್ಯಕ್ರಮದಲ್ಲಿ ಸಂಪುಟ ಸಚಿವ ಹೇಮರಾಮ್ ಚೌಧರಿ, ಶಾಸಕ ಹರೀಶ್ ಚೌಧರಿ, ಶಾಸಕ ಮೇವರಾಂ ಜೈನ್ ಮತ್ತು ಶಾಸಕ ಪದ್ಮರಾಮ್ ಮೇಘಲಾಲ್ ಮೊದಲಾದವರು ಉಪಸ್ಥಿತರಿದ್ದರು.
19 ಹೊಸ ಜಿಲ್ಲೆಗಳ ರಚನೆ: ಬಲೋತ್ರಾ ಸೇರಿದಂತೆ 19 ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚೆಗೆ ಘೋಷಿಸಿದ್ದರು. ಈ ಘೋಷಣೆಯ ನಂತರ ಅವರು ಮೊದಲ ಬಾರಿಗೆ 2 ದಿನಗಳ ಭೇಟಿಗಾಗಿ ಬಾರ್ಮರ್ಗೆ ಆಗಮಿಸಿದ್ದರು. ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗೆಹ್ಲೋಟ್ ಸರ್ಕಾರ ಸಾಕಷ್ಟು ಉಚಿತಗಳನ್ನು ಘೋಷಣೆ ಮಾಡಿದೆ. ಇದು ಕರ್ನಾಟಕದ ಪುನರಾವರ್ತನೆ ಎಂದು ಕೂಡಾ ಹೇಳಲಾಗುತ್ತಿದೆ.
ಇದನ್ನೂ ಓದಿ: ನಯಾಗರ ಜಲಪಾತಕ್ಕೆ ಆಯತಪ್ಪಿ ಬಿದ್ದು ಪಂಜಾಬ್ ಯುವತಿ ಸಾವು