ಮುಂಬೈ: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಗಡುವು ಹಾಕಿದ್ದಲ್ಲದೇ, ಪ್ರಚೋದನಾತ್ಮಕ ಭಾಷಣ ಮಾಡಿದ್ದ ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ.
ಔರಂಗಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ರಾಜ್ ಠಾಕ್ರೆ ಮಾಡಿದ ಭಾಷಣವು ಸಮಾಜವನ್ನು ವಿಘಟಿಸುವ ಗುರಿ ಹೊಂದಿದೆ. ಅಲ್ಲದೇ, ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಮೇಲೆ ದಾಳಿ ಮಾಡುವುದೇ ಇದರ ಉದ್ದೇಶವಾಗಿತ್ತು ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥರು 'ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಕ್ಕೆ 'ಹಿಂದೂ' ಪದದ ಬಗ್ಗೆಯೇ ಅಲರ್ಜಿ ಇದೆ ಎಂದು ಹೇಳಿದ್ದಾರೆ. ಅವರ ಈ ಭಾಷಣವು ಸಮಾಜದಲ್ಲಿ ಒಡಕು ಮತ್ತು ದ್ವೇಷ ಸೃಷ್ಟಿಸುವ ಪ್ರಯತ್ನವಾಗಿದೆ. ಪೊಲೀಸರು ಅವರ ಭಾಷಣ ಆಲಿಸಿ ಆಕ್ಷೇಪಾರ್ಹ ಎಂಬುದನ್ನು ನಿರ್ಧರಿಸಿದ ಬಳಿಕ ಅವರ ವಿರುದ್ಧ ಕ್ರಮಕ್ಕೆ ತೀರ್ಮಾನಿಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.
ಓದಿ: ಹಿಂದುತ್ವದ ನೆಪದಲ್ಲಿ ಬಿಜೆಪಿ ನನ್ನ ತಂದೆಗೆ ಮೋಸ ಮಾಡಿದೆ: ಸಿಎಂ ಉದ್ಧವ್ ಠಾಕ್ರೆ