ಮುಂಬೈ (ಮಹಾರಾಷ್ಟ್ರ): ಉದ್ಯಮಿ ರಾಜ್ ಕುಂದ್ರಾ ವಿರುದ್ಧದ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿಯಾನ್ ಇಂಡಸ್ಟ್ರೀಸ್ನ ನಾಲ್ವರು ಉದ್ಯೋಗಿಗಳು ಅವರ ವಿರುದ್ಧ ಸಾಕ್ಷಿಗಳಾಗಿದ್ದಾರೆ. ತನಿಖೆಯಲ್ಲಿ ಕುಂದ್ರಾ ಸಹಕರಿಸಿಲ್ಲ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಈ ನಾಲ್ವರು ನೌಕರರು ಈ ದಂಧೆಯ ಕೆಲಸದ ಕುರಿತು ಸಂಪೂರ್ಣ ವಿವರಗಳನ್ನು ಮುಂಬೈ ಅಪರಾಧ ಶಾಖೆಯ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಕುಂದ್ರಾ ಮತ್ತು ಅವರ ಪತ್ನಿ ಶಿಲ್ಪಾ ಶೆಟ್ಟಿಯನ್ನು ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಅಧಿಕಾರಿಗಳು ಮುದ್ರಕ, ಲ್ಯಾಪ್‌ಟಾಪ್ ಮತ್ತು ದಾಖಲೆಗಳನ್ನು ತುಂಬಿದ ಪೆಟ್ಟಿಗೆಯನ್ನೂ ವಶಪಡಿಸಿಕೊಂಡಿದ್ದಾರೆ.
ಯುಕೆ ಮೂಲದ ಸಂಸ್ಥೆಯ ಸಹಯೋಗದೊಂದಿಗೆ ಅಶ್ಲೀಲ ಕಂಟೆಂಟ್ ರಚಿಸಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಕ್ರೈಂ ಬ್ರಾಂಚ್ ಪೊಲೀಸರು ಕುಂದ್ರಾನನ್ನು ಬಂಧಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಕುಂದ್ರಾ ಆಗಿದ್ದು, ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ ಎಂದು ರಾಜ್ ಕುಂದ್ರಾ ಬಂಧನದ ನಂತರ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗರೇಲ್ ಹೇಳಿದ್ದಾರೆ. ಮುಂಬೈ ಪೊಲೀಸರ ಪ್ರಕಾರ, ಇತರ 10 ಜನರನ್ನು ಸಹ ಬಂಧಿಸಲಾಗಿದೆ. ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಅಪಾರ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಶ್ಲೀಲ ಚಿತ್ರಗಳ ರಚನೆ ಮತ್ತು ಆ್ಯಪ್‌ಗಳ ಬಳಕೆಯ ಆಧಾರದ ಮೇಲೆ ಫೆಬ್ರವರಿ 2021 ರಲ್ಲಿ ಮುಂಬೈನಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ. ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ್ರಾ ಮತ್ತು ಅವರ ಕಂಪನಿಯ ಐಟಿ ಮುಖ್ಯಸ್ಥ ರಿಯಾನ್ ಥೋರ್ಪ್ ಅವರನ್ನು ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇದನ್ನೂ ಓದಿ: Pornography case: ಮಾಡೆಲ್ ಗೆಹನಾ ಸೇರಿ ಮೂವರಿಗೆ ಮುಂಬೈ ಕ್ರೈಂ ಬ್ರಾಂಚ್ ನೋಟಿಸ್!