ಮುಂಬೈ (ಮಹಾರಾಷ್ಟ್ರ): ಹಣ ಪಾವತಿ ವಿವಾದದಿಂದಾಗಿ ಹರಿಯಾಣದಿಂದ ಮುಂಬೈಗೆ 5 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಎಂಜಿನ್ ಅನ್ನು ತಲುಪಿಸಲು ಟ್ರಾನ್ಸ್‌ಪೋರ್ಟ್ ಸಂಸ್ಥೆ ವಿಫಲವಾದ ಕಾರಣ ಮುಂಬೈ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ್ದಾರೆ. ಎರಡು ತಿಂಗಳ ಹಿಂದೆ ಹರಿಯಾಣದ ಕಲ್ಕಾದಲ್ಲಿ ಟ್ರೇಲರ್ ಟ್ರಕ್‌ಗೆ ರೈಲ್ವೆ ಎಂಜಿನ್ ಲೋಡ್ ಮಾಡಲಾಗಿತ್ತು.
ಆದರೆ, ಇದುವರೆಗೂ ಮುಂಬೈಗೆ ಎಂಜಿನ್ ತಲುಪಿಲ್ಲ. ಈ ಬಗ್ಗೆ ಭಾರತೀಯ ರೈಲ್ವೆಯ ಅಧಿಕೃತ ಟ್ರಾನ್ಸ್‌ಪೋರ್ಟರ್ ಅನಿಲ್ ಕುಮಾರ್ ಗುಪ್ತಾ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ವಡಾಲಾ ಟಿಟಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: 50 ಲಕ್ಷ ರೂ. ಲಂಚ ಪ್ರಕರಣ: ಸಿಬಿಐನಿಂದ ರೈಲ್ವೆ ಡಿವಿಜನಲ್ ಮ್ಯಾನೇಜರ್ ಬಂಧನ
ಈ ದೂರಿನ ಪ್ರಕಾರ, ಟ್ರಾನ್ಸ್‌ಪೋರ್ಟರ್ ಅನಿಲ್ ಕುಮಾರ್ ಗುಪ್ತಾ ಅವರು ಮುಂಬೈಗೆ ರೈಲ್ವೆ ಎಂಜಿನ್ ತಲುಪಿಸುವ ನಿಟ್ಟಿನಲ್ಲಿ ಪವನ್ ಶರ್ಮಾ ಎಂಬ ಇನ್ನೊಬ್ಬ ಟ್ರಾನ್ಸ್ಪೋರ್ಟರ್ರನ್ನು ನೇಮಿಸಿಕೊಂಡಿದ್ದರು. ಕಲ್ಕಾಗೆ ರೈಲ್ವೆ ಎಂಜಿನ್ ತಲುಪಿಸಲು ಮತ್ತು ಅಲ್ಲಿಂದ ಮುಂಬೈಗೆ ಮತ್ತೊಂದು ಎಂಜಿನ್ಅನ್ನು ಸಾಗಿಸಲು ಪವನ್ ಶರ್ಮಾ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಅಲ್ಲದೇ, ಈ ಸಂಬಂಧ ಪವನ್ ಶರ್ಮಾ ಕಂಪನಿ ಜೊತೆಗೆ 4.25 ಲಕ್ಷ ರೂಪಾಯಿಗಳ ಪಾವತಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 4 ಲಕ್ಷ ರೂ. ಹಣವನ್ನೂ ಪವನ್ ಶರ್ಮಾ ಕಂಪನಿಗೆ ಅನಿಲ್ ಕುಮಾರ್ ಗುಪ್ತಾ ಪಾವತಿಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಸುಳ್ಳು ದಾಖಲೆ ಸೃಷ್ಟಿಸಿ ರೈಲ್ವೆ ನೌಕರಿ ಪಡೆದ ಭೂಪ: 32 ವರ್ಷಗಳ ನಂತರ ಪ್ರಕರಣ ಬೆಳಕಿಗೆ
ಈ ಬಗ್ಗೆ ಪವನ್ ಶರ್ಮಾ ಅವರನ್ನು ಪೊಲೀಸರು ಸಂಪರ್ಕಿಸಿ ವಿಚಾರಿಸಿದ್ದಾರೆ. ಶರ್ಮಾ ಅವರ ಕಂಪನಿಯು ಮೇ 2ರಂದು ಟ್ರೇಲರ್ ಟ್ರಕ್‌ಗೆ ರೈಲ್ವೆ ಎಂಜಿನ್ ಅನ್ನು ಲೋಡ್ ಮಾಡಿತ್ತು. ಆದರೆ, ಹಣ ಪಾವತಿ ವಿವಾದದ ವಿಳಂಬ ಕಾರಣದಿಂದ ಇಲ್ಲಿನ ರೈಲ್ವೆಯ ಪರೇಲ್ ಯಾರ್ಡ್‌ಗೆ ಅದನ್ನು ತಲುಪಿಸಲಿಲ್ಲ. ಸುಮಾರು 60,000 ರೂ. ಬಾಕಿ ಪಾವತಿ ಮಾಡಿದ್ದರಿಂದ ಈ ಗೊಂದಲ ಉಂಟಾಗಿದೆ ಎಂದು ಶರ್ಮಾ ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಗುಪ್ತಾ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆ 406 (ನಂಬಿಕೆ ಉಲ್ಲಂಘನೆ) ಮತ್ತು 420 (ವಂಚನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧನ ಮಾಡಿಲ್ಲ. ಒಟ್ಟಾರೆಯಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: 2 ಕಿಮೀ ಉದ್ದದ ರೈಲ್ವೆ ಹಳಿಯನ್ನೇ ಕದ್ದೊಯ್ದ ಕಳ್ಳರು.. ಮೂವರು ಸಿಬ್ಬಂದಿ ಅಮಾನತು