ನಾಗ್ಪುರ(ಮಹಾರಾಷ್ಟ್ರ): ಆಹಾರ, ಶಕ್ತಿವರ್ಧಕ, ಐಸ್ಕ್ರೀಂಗಳಲ್ಲಿ ಬಳಸುವ ಪಿಸ್ತಾದಲ್ಲಿ ಶೇಂಗಾವನ್ನು ಮಿಶ್ರಣ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಅಕ್ರಮ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿ, 12 ಲಕ್ಷ ರೂಪಾಯಿ ಮೌಲ್ಯದ ಸರಕನ್ನು ವಶಕ್ಕೆ ಪಡೆಯಲಾಗಿದೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಫೈರಿಂಗ್ ಪ್ರದೇಶದಲ್ಲಿರುವ ಪಿಸ್ತಾ ತಯಾರಿಸುವ ಕಾರ್ಖಾನೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಶೇಂಗಾವನ್ನು ಖರೀದಿಸಿ, ಒಣಗಿಸಿ ಸಂಸ್ಕರಿಸಿದ ಬಳಿಕ ಅದನ್ನು ಪಿಸ್ತಾದಲ್ಲಿ ಬೆರೆಸಲಾಗುತ್ತಿತ್ತು. ಕಲಬೆರಕೆ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
₹70 ಶೇಂಗಾ ₹1100ಗೆ ಪಿಸ್ತಾ ಎಂದು ಮಾರಾಟ: ಕಾರ್ಖಾನೆ ಮಾಲೀಕನ ಖತರ್ನಾಕ್ ಬುದ್ಧಿಯಿಂದಾಗಿ 70 ರೂಪಾಯಿಗೆ ಕೆಜಿ ಶೇಂಗಾ ಖರೀದಿ ಮಾಡಿ, ಅದನ್ನು ಪಿಸ್ತಾವನ್ನಾಗಿ ಬದಲಿಸಿ ಮಾರುಕಟ್ಟೆಯಲ್ಲಿ 1100 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಮಾರಾಟಕ್ಕೆಂದು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ಶೇಂಗಾ ಪಿಸ್ತಾವನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ದಾಳಿಯ ವೇಳೆ ಸೆಣಬಿನ ಮೂಟೆಗಳಲ್ಲಿ 120 ಕೆಜಿ ಕಲಬೆರಕೆ ಪಿಸ್ತಾ ಪತ್ತೆಯಾಗಿದೆ. ಅಲ್ಲದೇ, ಕಾರ್ಮಿಕರು ಯಂತ್ರದಿಂದ ಪಿಸ್ತಾ ಕತ್ತರಿಸುವುದು ಮತ್ತು ಕಲಬೆರಕೆ ಪಿಸ್ತಾವನ್ನು ಒಣಗಿ ಹಾಕಿರುವುದು ಕಂಡುಬಂದಿದೆ.
ಕಾರ್ಖಾನೆ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಲಬೆರಕೆ ಪಿಸ್ತಾ ತಯಾರಿಸುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ. ಪಿಸ್ತಾ ತಯಾರಿಸುವ 2 ಯಂತ್ರಗಳು, 7 ಲಕ್ಷ ಮೌಲ್ಯದ ಕಲಬೆರಕೆ ಪಿಸ್ತಾ, ಕಲಬೆರಕೆಗಾಗಿ ತಂದಿದ್ದ 2 ಲಕ್ಷ ಮೌಲ್ಯದ ಶೇಂಗಾ ಸೇರಿದಂತೆ ಒಟ್ಟಾರೆ 12 ಲಕ್ಷ 23 ಸಾವಿರ ರೂಪಾಯಿ ಮೌಲ್ಯದ ಸರಕನ್ನು ಜಪ್ತಿ ಮಾಡಲಾಗಿದೆ.
ಓದಿ: ಆಸ್ಪತ್ರೆಯ ಶವಾಗಾರದಲ್ಲಿ ಮಹಿಳೆಯರ ಶವದ ನಗ್ನ ಫೋಟೊ ತೆಗೆದು ವಿಕೃತಿ: ಆರೋಪಿ ಬಂಧನ