ಮುಂಬೈ: 2019 ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಸಂಸದ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ ಮಾಡುತ್ತಿದ್ದರೆ, ಇತ್ತ ರಾಹುಲ್ ಮಾತ್ರ ‘ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ನಾನು ಗಾಂಧಿ’ ಎಂದು ಹೇಳಿದ್ದಾರೆ. ಇದರ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಿಡಿಕಾರಿದ್ದಾರೆ. ಸಾವರ್ಕರ್ ಮಹಾರಾಷ್ಟ್ರದ ಹೆಮ್ಮೆ. ಅವರ ಕುರಿತಾದ ರಾಹುಲ್ ಹೇಳಿಕೆ ಖಂಡನೀಯ. ಅವರಿಗೆ ಶಿಕ್ಷೆಯಾಗಬೇಕು ಎಂದು ಗುಡುಗಿದ್ದಾರೆ.
ಶನಿವಾರ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಶಿಂಧೆ, ವೀರ ಸಾವರ್ಕರ್ ಅವರು ಮಹಾರಾಷ್ಟ್ರಕ್ಕೆ ಮಾತ್ರವಲ್ಲದೇ, ಇಡೀ ರಾಷ್ಟ್ರದ ಆದರ್ಶವಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಇಟ್ಟುಕೊಂಡು ಕೆಳಮಟ್ಟದ ಹೇಳಿಕೆ ನೀಡುವುದು ತಕ್ಕುದಲ್ಲ. ಸಾವರ್ಕರ್ ಬಗ್ಗೆ ರಾಹುಲ್ಗೆ ಏನು ಗೊತ್ತು?. ಸಾವರ್ಕರ್ರನ್ನು ಅವಮಾನಿಸಿದ ರಾಹುಲ್ಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ಬಗ್ಗೆ ಮಾತನಾಡಿದ ಶಿಂಧೆ ಅವರು, ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಮಾಡಿದ ಕಾನೂನಿನ ಪ್ರಕಾರ ಅಮಾನತುಗೊಳಿಸಲಾಗಿದೆ. ಇದೇ ಕಾನೂನಿನ ಅಡಿಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಮತ್ತು ಇತರ ಹಲವಾರು ರಾಜಕಾರಣಿಗಳನ್ನು ಅನರ್ಹಗೊಳಿಸಲಾಗಿದೆ. ಆಗ ಯಾರೂ ಇದರ ಬಗ್ಗೆ ಸೊಲ್ಲೆತ್ತಲಿಲ್ಲ. ಈಗೇನು ಸಮಸ್ಯೆ ಎಂದು ಪ್ರಶ್ನಸಿದರು.
"ರಾಹುಲ್ ಗಾಂಧಿಯನ್ನು ಅವರದ್ದೇ ಪಕ್ಷ ಅಧಿಕಾರದ ವೇಳೆ ರೂಪಿಸಿದ ಕಾನೂನಿನ ಪ್ರಕಾರ ಅನರ್ಹಗೊಳಿಸಲಾಗಿದೆ. ಅಂದಿನ ನಾಯಕರ ಅನರ್ಹದ ವೇಳೆ ಆಗದ ಸಮಸ್ಯೆ ಇಂದು ರಾಹುಲ್ಗೆ ಹೇಗಾಗುತ್ತದೆ. ಆಗ ಪ್ರಜಾಪ್ರಭುತ್ವವು ದಾಳಿಗೆ ಒಳಗಾಗಿರಲಿಲ್ಲವೇ?" ಎಂದು ಶಿಂಧೆ ಕಿಡಿಕಾರಿದರು.
ಮೋದಿ ಉಪನಾಮವನ್ನಿಟ್ಟುಕೊಂಡ ಎಲ್ಲರೂ ಕಳ್ಳರು ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಹಿಂದುಳಿದ ಸಮುದಾಯವನ್ನು ಹೀಯಾಳಿಸಿದ್ದಾರೆ. ಇದು ಆ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ಬಗ್ಗೆ ಕ್ಷಮೆ ಕೋರಬೇಕಾದ ವ್ಯಕ್ತಿ, ಅದನ್ನು ಸಮರ್ಥಿಸಿಕೊಂಡು ಅದನ್ನೇ ಪುನರಾವರ್ತಿಸುತ್ತಿದ್ದಾರೆ. ಇದರಲ್ಲಿ ಸಾವರ್ಕರ್ ಅವರನ್ನು ಎಳೆದುತಂದಿದ್ದಾರೆ. ಈ ನಡೆಯನ್ನು ಸರಿಪಡಿಸಿಕೊಳ್ಳದಿದ್ದರೆ ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತದೆ ಎಂದು ಶಿಂಧೆ ಹೇಳಿದರು.
ರಾಹುಲ್ ಹೇಳಿದ್ದೇನು?: ಸಂಸತ್ ಸದಸ್ಯತ್ವದಿಂದ ಅನರ್ಹವಾದ ಬಳಿಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆದ್ದರು. ''ನನ್ನ ಹೆಸರು ರಾಹುಲ್ ಗಾಂಧಿ, ವೀರ್ ಸಾವರ್ಕರ್‌ರಂತೆ ನಾನು ಕ್ಷಮೆ ಕೇಳುವುದಿಲ್ಲ'' ಎಂದಿದ್ದರು. ''ಸತ್ಯಕ್ಕಾಗಿ ಹೋರಾಡುವುದು ಹಾಗೂ ದೇಶದ ಪ್ರಜಾಪ್ರಭುತ್ವದ ಸ್ವರೂಪದ ರಕ್ಷಣೆಗೆ ಹೋರಾಡುತ್ತೇನೆ. ನಾನು ಯಾವುದೇ ಅಡೆತಡೆಗಳನ್ನು ಲೆಕ್ಕಿಸದೇ ಹೋರಾಟವನ್ನು ಮುಂದುವರಿಸುತ್ತೇನೆ" ಎಂದಿದ್ದರು.
"ಮೋದಿ ಅವರು ನನ್ನ ಮುಂದಿನ ಭಾಷಣಕ್ಕೆ ಹೆದರುತ್ತಿದ್ದಾರೆ. ವಿಶೇಷವಾಗಿ ಅದಾನಿ ಗುಂಪಿನ ಬಗ್ಗೆ ಪ್ರಧಾನಿಯಲ್ಲಿ ಭಯ ಕಾಡುತ್ತಿದೆ ಎಂದು ದೂರಿದ್ದರು. ಅದಾನಿ ಕುರಿತ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಮೋದಿ ಅವರು ಹೆದರಿ ನನ್ನ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಸಂಸತ್ತಿನಲ್ಲಿ ತನ್ನ ವಿರುದ್ಧ ಮಾಡಲಾದ ಆರೋಪಗಳಿಗೆ ಪ್ರತಿಕ್ರಿಯಿಸಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಮಾತ್ರ ಕೇಳಿದ್ದೆ. ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನೀವು ಏಕೆ ಕ್ಷಮೆಯಾಚಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ನಾನು ಕ್ಷಮೆ ಕೇಳುವುದಿಲ್ಲ" ಎಂದು ಹೇಳಿರುವುದು ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ವೀರ್ ಸಾವರ್ಕರ್‌ರಂತೆ ನಾನು ಕ್ಷಮೆ ಕೇಳುವುದಿಲ್ಲ ರಾಹುಲ್ ಗಾಂಧಿ ಗರಂ