ನವದೆಹಲಿ: ಕಳೆದ ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ರಾಹುಲ್ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು 75 ಜಿಲ್ಲೆಗಳಲ್ಲಿ ಸಂಚರಿಸಿ ನಿನ್ನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಂಡಿದೆ. ಬಳಿಕ ಕಾಂಗ್ರೆಸ್ನ ಹಲವು ನಾಯಕರು ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆ ಮಾಹಿತಿ ಹಂಚಿಕೊಂಡಿರುವ ಎಐಸಿಸಿ ಸಂಘಟನೆಯ ಉಸ್ತುವಾರಿ ಕಾರ್ಯದರ್ಶಿ ಖಾಜಿ ನಿಜಾಮುದ್ದೀನ್, "ಹೊಸ ವರ್ಷವು ರಾಹುಲ್-ಖರ್ಗೆ ನಾಯಕತ್ವದ ಹೊಸ ಶೈಲಿಯನ್ನು ಕಂಡಿದೆ. ಯಾತ್ರೆಯ ನಂತರ ರಾಹುಲ್ ಗಾಂಧಿ ಅವರು ನಿರ್ವಿವಾದ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಜೊತೆಗೆ ಪಕ್ಷದ ಉನ್ನತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಭವಿಷ್ಯದ ಸವಾಲುಗಳಿಗೆ ಪಕ್ಷವನ್ನು ಬಲಪಡಿಸಲಿದೆ" ಎಂದರು.
ನಾಯಕನಿಗೆ ಕಾರ್ಯಕರ್ತರ ಮೆಚ್ಚುಗೆ: ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಶ್ರೀನಗರದಿಂದ ಹಿಂತಿರುಗಿದ ತಮ್ಮ ನಾಯಕನನ್ನು ಸ್ವಾಗತಿಸಲು ಪಕ್ಷದ ಕಾರ್ಯಕರ್ತರು ರಾಹುಲ್ ನಿವಾಸದ ಹೊರಗೆ ಸಾಲುಗಟ್ಟಿ ನಿಂತಿದ್ದರು. ಇದು ನಾಯಕನ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸುವಂತಿತ್ತು. ಜೋಡೋ ಯಾತ್ರೆಯಿಂದ ಪಕ್ಷಕ್ಕಾಗುವ ಲಾಭವನ್ನು ಪಟ್ಟಿ ಮಾಡಿದ ಖಾಜಿ, "ಈ ಹಿಂದೆ ಜನರನ್ನು ರಾಹುಲ್ ಗಾಂಧಿ ಮಾತನ್ನು ಕೇಳುವಂತೆ ಕೈ ನಾಯಕರು ಒತ್ತಾಯಿಸಬೇಕಿತ್ತು. ಆದರೆ ಈಗ ಜನರು ಅವರ ಮಾತನ್ನೇ ಕೇಳುತ್ತಾರೆ. ರಾಹುಲ್ ಅವರ ಬಗೆಗಿದ್ದ ಜನರ ಅಭಿಪ್ರಾಯ ಬದಲಾಗಿದೆ. ಈ ಯಾತ್ರೆಯು ಪಕ್ಷದ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸುವಂತೆ ಮಾಡಿದೆ" ಎಂದರು. "ಅಲ್ಲದೇ ಪಕ್ಷದ ಸಂದೇಶವನ್ನು, ಭರವಸೆಯ ಯೋಜನೆಗಳನ್ನು ಮತ್ತಷ್ಟು ಹರಡಲು, ಜನರಿಗೆ ತಲುಪಿಸಲು 'ಹಾತ್ ಸೆ ಹಾತ್ ಜೋಡೋ(ಕೈಗೆ ಕೈ ಜೋಡಿಸಿ)' ಅಭಿಯಾನ ಮುಂಬರುವ ದಿನಗಳಲ್ಲಿ ಆರಂಭವಾಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಬರಿಗಾಲಿನಲ್ಲೇ ಭಾರತ್ ಜೋಡೋ ಯಾತ್ರೆ ಪೂರ್ಣಗೊಳಿಸಿದ ದಿನೇಶ್ ಶರ್ಮಾ..!
ಬಳಿಕ ಖರ್ಗೆ ಬಗ್ಗೆ ಮಾತನಾಡಿದ ಅವರು, "ನಮ್ಮ ಸಂಘಟನೆಯ ನೇತೃತ್ವ ವಹಿಸಲು ಅನುಭವಿ ವ್ಯಕ್ತಿಯ ಅವಶ್ಯಕತೆ ಪಕ್ಷಕ್ಕಿತ್ತು. ಖರ್ಗೆ ಅವರು ಚುನಾವಣೆಗಳನ್ನು ಹೇಗೆ ಎದುರಿಸಬೇಕು ಮತ್ತು ಪ್ರಸ್ತುತ ಸಮಸ್ಯೆಗಳನ್ನು ಹೇಗೆ ಸರಿಪಡಿಸಬೇಕು ಎಂಬುದನ್ನು ಚೆನ್ನಾಗಿಯೇ ಅರಿತಿದ್ದರು. ಅಲ್ಲದೇ ಅವರಿಗೆ ಹಲವಾರು ಚುನಾವಣೆಗಳನ್ನು ಗೆದ್ದ ಅನುಭವವಿದೆ. ಅವರು ಪಕ್ಷದ ಅಧ್ಯಕ್ಷರಾಗುವ ಮೊದಲು, ವಿಧಾನಸಭಾ ಸ್ಥಾನಕ್ಕೆ ಹೇಗೆ ಸ್ಪರ್ಧಿಸಬೇಕೆಂಬುದರ ಬಗ್ಗೆ ನನಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಿದ್ದರು" ಎಂದು ಹೇಳಿದರು.
'ರಾಹುಲ್-ಖರ್ಗೆ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತಾರೆ..' : "ರಾಹುಲ್ ಗಾಂಧಿ ಮತ್ತು ಖರ್ಗೆ ಒಂದು ತಂಡವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚುನಾವಣೆ ವರ್ಷದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿರ್ಧಾರವನ್ನು ಇಬ್ಬರು ತೆಗೆದುಕೊಳ್ಳುತ್ತಾರೆ. ಶ್ರೀನಗರದಲ್ಲಿ ಖರ್ಗೆಯವರು ಮಾಡಿದ ಭಾಷಣದಲ್ಲಿ ಪಕ್ಷಕ್ಕೆ ರಾಹುಲ್ ಯಾತ್ರೆಯ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ನಂತರ ದೇಶಾದ್ಯಂತ ಜೋಡೋ ಯಾತ್ರೆಯ ಬಗ್ಗೆ ಉಲ್ಲೇಖಿಸಿ ಮಾತನಾಡುತ್ತಿದ್ದಾರೆ" ಎಂದು ಮಧ್ಯಪ್ರದೇಶದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಪಿ ಅಗರ್ವಾಲ್ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಪಶ್ಚಿಮ ಬಂಗಾಳದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಬಿಪಿ ಸಿಂಗ್, "ರಾಹುಲ್-ಖರ್ಗೆ ನಾಯಕತ್ವದ ತಂಡವು ಕಳೆದ ಅಕ್ಟೋಬರ್‌ನಿಂದ ಸುಗಮವಾಗಿ ಕೆಲಸ ಮಾಡುತ್ತಿದೆ. ಅವರು ಪಕ್ಷವನ್ನು ಮತ್ತಷ್ಟು ಒಗ್ಗೂಡಿಸುತ್ತಾರೆ" ಎಂದರು.
ಇದನ್ನೂ ಓದಿ: ಮಕ್ಕಳಂತೆ ಹಿಮದಲ್ಲಿ ಆಟವಾಡಿದ ರಾಹುಲ್ ಗಾಂಧಿ - ಸಹೋದರಿ ಪ್ರಿಯಾಂಕಾ