ಮಲಪ್ಪುರಂ: ಕಾಂಗ್ರೆಸ್ ಮುಖಂಡ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಇಂದು ಮತ್ತೆ ನಾಳೆ ಎರಡು ದಿನಗಳ ಕಾಲ ಕೇರಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಶಾಸಕ ಎ.ಪಿ. ಅನಿಲ್ ಕುಮಾರ್, ಡಿಸಿಸಿ ಅಧ್ಯಕ್ಷ ಅಡ್ವಾ. ವಿ ವಿ ಪ್ರಕಾಶ್ ಅವರು ರಾಹುಲ್ ಗಾಂಧಿಯವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಮುಂಬರುವ ಕೇರಳ ವಿಧಾನ ಸಭಾ ಚುನಾವಣೆ ಹಿನ್ನೆಲೆ ವಯನಾಡಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಮತಯಾಚನೆ ಅಭಿಯಾನ ಆರಂಭಿಸಿದ್ದಾರೆ. ಇಂದು ಮಧ್ಯಾಹ್ನ ವಯನಾಡಿನಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ವನಿಯಂಬಲಂ ರೈಲ್ವೆ ಪ್ಲಾಟ್‌ಫಾರ್ಮ್ ಹಾಗೂ 5.30 ಕ್ಕೆ ಚೆರುಕೋಡ್ ಮಹಿಳಾ ಸಹಕಾರ ಸಂಘದ ಬೆಳ್ಳಿ ಮಹೋತ್ಸವದ ಕಾರ್ಯಕ್ರಮದ ಉದ್ಘಾಟನೆ ನಡೆಸಿ ನಂತರ ನೀಲಂಬೂರಿನಲ್ಲಿರುವ ಆದಿವಾಸಿ ಸಂಘವನ್ನು ಸಂಜೆ 7 ಗಂಟೆಗೆ ಉದ್ಘಾಟಿಸಲಿದ್ದಾರೆ.
ಇನ್ನು ಮಂಗಳವಾರ ಬೆಳಗ್ಗೆ 10.30ಕ್ಕೆ ಎಡವಣ್ಣ ಅನಾಥಾಶ್ರಮ ಪಾಲಿಟೆಕ್ನಿಕ್ ಉದ್ಘಾಟನೆ ನಡೆಸಲಿದ್ದು, 11: 30 ಕ್ಕೆ ಸೀತಿ ಹಾಜಿ ಕ್ಯಾನ್ಸರ್ ಸ್ಮಾರಕ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.30 ಕ್ಕೆ ಕುಜಿಮಣ್ಣ ಹೈಟೆಕ್ ಶಾಲೆ ಉದ್ಘಾಟಿಸಿ ನಂತರ 1.40 ಕ್ಕೆ ವಿಶೇಷ ವಿಮಾನದಲ್ಲಿ ತಿರುವನಂತಪುರಂಗೆ ವಾಪಸ್ ಆಗಮಿಸಲಿದ್ದು, ರಮೇಶ್ ಚೆನ್ನಿಥಾಲಾ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಐಶ್ವರ್ಯ ಕೇರಳ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.