ಚಂಡೀಗಢ(ಪಂಜಾಬ್): ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ರ 'ಭಯ್ಯಾ' ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಿಎಂ ಚನ್ನಿ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಉತ್ತರಪ್ರದೇಶ ಮತ್ತು ಬಿಹಾರದ ವಲಸಿಗರ ಬಗ್ಗೆ ನಮಗೆ ಗೌರವವಿದೆ. ನಮ್ಮದು ಉಗುರು ಮತ್ತು ಮಾಂಸದ ಸಂಬಂಧವಿದ್ದಂತೆ. ನಾನು ಭಯ್ಯಾ ಎಂದು ಹೇಳಿದ್ದು ವಲಸಿಗರ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಇದನ್ನು ಖಂಡಿಸಿ ನಾನು ಭಯ್ಯಾಗಳನ್ನು ದೂರ ಇಡಿ ಎಂದು ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪ್ರಿಯಾಂಕಾ ಗಾಂಧಿ ಕೂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಲಖೀಂಪುರ ಖೇರಿಯಲ್ಲಿ ರೈತರ ಮಾರಣ ಹೋಮ ನಡೆಸಿ ಇದೀಗ ರೈತರ ಪರವಾಗಿ ಮಾತನಾಡಲು ಬಂದಿದ್ದಾರೆ. ವರ್ಷಗಟ್ಟಲೇ ರೈತರು ಪ್ರತಿಭಟನೆ ನಡೆಸಿದಾಗ ಈ ಬಗ್ಗೆ ಕ್ಯಾರೇ ಎಂದಿರಲಿಲ್ಲ ಎಂದು ಟೀಕಿಸಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಪಕ್ಷ ತೊರೆದಿದ್ದರ ಬಗ್ಗೆ ರಾಹುಲ್ ಸ್ಪಷ್ಟನೆ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಪಂಜಾಬ್ನಲ್ಲಿ ನಡೆಯುತ್ತಿರುವ ಪರ ವಿರೋಧದ ಟೀಕೆಯ ಮಧ್ಯೆ ಅಮರೀಂದರ್ ಸಿಂಗ್ ಅವರ ಬಗ್ಗೆ ರಾಹುಲ್ ಮಾತನಾಡಿದ್ದಾರೆ.
ಬಡವರಿಗೆ ಉಚಿತ ವಿದ್ಯುತ್ ನೀಡುವ ನನ್ನ ಪ್ರಸ್ತಾಪವನ್ನು ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಒಪ್ಪಲಿಲ್ಲ. ಹೀಗಾಗಿ ಅವರನ್ನು ಪಕ್ಷದಿಂದ ಕೈ ಬಿಡಲಾಯಿತು ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ, ನಾನು ಬಡವರಿಗೆ ಉಚಿತ ವಿದ್ಯುತ್ ನೀಡುವ ಸಲುವಾಗಿ ವಿದ್ಯುತ್ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಓದಿ: ಪಾಕಿಸ್ತಾನದ 7 ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಂಡ ಬಿಎಸ್‌ಎಫ್