ಗೋವಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಪ್ರವಾಸಿ ರಾಜಕಾರಣಿ’ಯಾಗಿದ್ದು, ಚುನಾವಣೆಗೂ ಮುನ್ನವೇ ಗೋವಾಕ್ಕೆ ಬರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಕಲ್ಲಂಗುಟ್ನಲ್ಲಿ ಮತ ಪ್ರಚಾರ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಒಬ್ಬ ಪ್ರವಾಸಿ ರಾಜಕಾರಣಿ, ಅವರು ಚುನಾವಣೆಗೆ ಮುನ್ನವೇ ಗೋವಾಕ್ಕೆ ಬರುತ್ತಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ನಿಷ್ಠವಾಗಿರಬೇಕು. ಬಿಜೆಪಿ ಯಾವುದೇ ಕಾರಣಕ್ಕೂ ಚೀನಾದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದರು.
ಓದಿ: ಹಿಜಾಬ್ ವಿವಾದ: ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆ ಬುದ್ದಿಕೊಡಲಿ.. ಅವಳು ತಾರತಮ್ಯ ಮಾಡೋದಿಲ್ಲ ಎಂದ ರಾಹುಲ್ ಗಾಂಧಿ!
ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಪ್ರಚಾರದ ಕುರಿತು ಮಾತನಾಡಿದ ಅವರು, ಗೋವಾದ ಒಳಚರಂಡಿ ವ್ಯವಸ್ಥೆಯನ್ನು ನವದೆಹಲಿಯಲ್ಲಿ ಜಾರಿಗೆ ತರುವಂತೆ ಅರವಿಂದ್ ಕೇಜ್ರಿವಾಲ್ ಅವರಿಗೆ ಕೇಳಿಕೊಳ್ಳುತ್ತೇನೆ. ಮಮತಾ ಬ್ಯಾನರ್ಜಿಯವರು ಸಹ ಗೋವಾ ಮಾದರಿಯನ್ನು ಪಶ್ಚಿಮ ಬಂಗಾಳದಲ್ಲಿ ಅಳವಡಿಸಿಕೊಳ್ಳಬೇಕು.
ಪಶ್ಚಿಮ ಬಂಗಾಳವನ್ನು ಗೋವಾಕ್ಕೆ ತರಬೇಡಿ ಎಂದು ವಿನಂತಿಸುತ್ತೇನೆ. ಗೋವಾ ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೊಂದಿದ್ದು, ಪ. ಬಂಗಾಳದಲ್ಲಿ ಕೊಲೆ, ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಫೆಬ್ರವರಿ 14 ರಂದು ಗೋವಾ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.