ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆ ವೇಳೆ ಮೃತಪಟ್ಟವರ ವಿವರಗಳಿಲ್ಲ ಮತ್ತು ಪರಿಹಾರ ನೀಡಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ವತಃ ಪ್ರಧಾನಿಯೇ ತಪ್ಪನ್ನು ಒಪ್ಪಿಕೊಂಡು ದೇಶದ ಕ್ಷಮೆ ಯಾಚಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ನಿಮ್ಮ ತಪ್ಪಿನಿಂದಾಗಿ 700 ಮಂದಿ ಸಾವನ್ನಪ್ಪಿದ್ದಾರೆ. ಈಗ ಅವರ ವಿವರಗಳನ್ನು ಸುಳ್ಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ ವೇಳೆ ಸಾವನ್ನಪ್ಪಿದ ಅನ್ನದಾತರ ಕುಟುಂಬಗಳಿಗೆ ಆರ್ಥಿಕ ಪರಿಹಾರದ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಸಂಸತ್‌ನಲ್ಲಿ ಉತ್ತರಿಸಿದ್ದ ಸರ್ಕಾರ, ರೈತರ ಸಾವಿನ ಬಗ್ಗೆ ಮಾಹಿತಿ ಇಲ್ಲ, ಹೀಗಾಗಿ ಪರಿಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದೆ.
ಪಂಜಾಬ್ ಸರ್ಕಾರ 403 ಮೃತ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡಿದೆ. ಬೇರೆ ರಾಜ್ಯಗಳ 100 ಮಂದಿಯ ಪಟ್ಟಿ ಇದೆ. ಜನರು ನೀಡಿದ ಮಾಹಿತಿಯ ಆಧಾರದ ಮೇಲೆ ಇನ್ನೂ 200 ಮೃತ ರೈತರ ಹೆಸರುಗಳ ಮೂರನೇ ಪಟ್ಟಿ ಇದೆ. ಆದರೆ, ಸರ್ಕಾರ ಸಂಸತ್‌ನಲ್ಲಿ ಅಂತಹ ಪಟ್ಟಿಯೇ ಇಲ್ಲ ಎಂದಿದೆ ಅಂತ ದೂರಿದ್ದಾರೆ.
'ಸರ್ಕಾರಕ್ಕೆ ಮೃತ ರೈತರ ಪಟ್ಟಿ ನೀಡ್ತೇವೆ':
ರೈತರ ಸಾವಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಪಂಜಾಬ್ ಸರ್ಕಾರ 5 ಲಕ್ಷ ಪರಿಹಾರ ಮತ್ತು ಕೆಲವರಿಗೆ ಉದ್ಯೋಗಗಳನ್ನು ನೀಡಿದೆ. ಪ್ರಾಣ ಕಳೆದುಕೊಂಡ ರೈತರ ಪಟ್ಟಿಯನ್ನು ಸೋಮವಾರ ಸಂಸತ್ತಿಗೆ ಸಲ್ಲಿಸುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ: 6 ವರ್ಷದಲ್ಲಿ 3 ಲಕ್ಷ ಮಕ್ಕಳು ನಾಪತ್ತೆ : ಸದನದಲ್ಲಿ ಮಾಹಿತಿ ನೀಡಿದ ಸಚಿವೆ ಇರಾನಿ