ದೌಸಾ (ರಾಜಸ್ಥಾನ): ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರೆದಿದೆ. ಈ ವೇಳೆ ರಾಹುಲ್ ಗಾಂಧಿ ಮಾತನಾಡಿದ್ದು, ತಮ್ಮನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಹೋಲಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿಸಭೆಯಲ್ಲೂ ತಮ್ಮನ್ನು ರಾಷ್ಟ್ರಪಿತರಿಗೆ ಹೋಲಿಕೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡು, ಇದು ಮರುಕಳಿಸದಂತೆ ನೋಡಿಕೊಳ್ಳಲು ಎಚ್ಚರಿಸಿದ್ದಾರೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಮಾಡಿದ ಒಳ್ಳೆಯ ಕೆಲಸಗಳನ್ನು ಪಟ್ಟಿ ಮಾಡುವುದರ ಜೊತೆಗೆ ಈಗ ಕಾಂಗ್ರೆಸ್ ಪಕ್ಷ ಜನರಿಗೆ ಏನು ಮಾಡಲು ಬಯಸುತ್ತಿದೆ ಎಂಬುದನ್ನು ತಿಳಿಸುವ ಕೆಲಸ ಪಕ್ಷದಿಂದ ಆಗಬೇಕು ಎಂದಿದ್ದಾರೆ.
"ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ಹೋರಾಡಿ ರಾಷ್ಟ್ರಪಿತರಾದರು. ತಮ್ಮ ಜೀವನನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ಅಂತಹ ಮಹಾತ್ಮನೊಂದಿಗೆ ನನ್ನನ್ನು ಎಂದಿಗೂ ಹೋಲಿಸಲು ಸಾಧ್ಯವಿಲ್ಲ. ಅಂತೆಯೇ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಪದೇ ಪದೆ ಅಂತಹ ಮಹಾನ್ ವ್ಯಕ್ತಿತ್ವದೊಂದಿಗೆ ನನ್ನನ್ನು ಹೋಲಿಸಬೇಡಿ" ಎಂದು ಸೂಚನೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಯು ರಾಜಸ್ಥಾನದಲ್ಲಿ ಸಂಚರಿಸುತ್ತಿದ್ದು, ದೌಸಾ ಜಿಲ್ಲೆಯಲ್ಲಿ ಸಾಗಿದೆ. ಬೆಳಗ್ಗೆ ಲಾಲ್ಸೋಟ್ ವಿಧಾನಸಭಾ ಕ್ಷೇತ್ರದ ಗೋಲಿಯಾ ಗ್ರಾಮದಿಂದ ಯಾತ್ರೆ ಪ್ರಾರಂಭಗೊಂಡಿದೆ. ಬಳಿಕ ದಿಡ್ವಾನ್ ಕೃಷಿ ಮಹಾವಿದ್ಯಾಲಯಕ್ಕೆ ತೆರಳಿದ ರಾಹುಲ್ ಗಾಂಧಿ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯಾತ್ರೆಯು ಮಧ್ಯಾಹ್ನ ವಿರಾಮದ ಬಳಿಕ ಸಲೆಂಪುರ ಅಂಚೆ ಕಚೇರಿಯಿಂದ ಮತ್ತೆ ಮುಂದುವರೆಯಲಿದೆ. ಇಂದು ಇಡೀ ದಿನ ಸುಮಾರು 23 ಕಿ.ಮೀನಷ್ಟು ದೂರ ಯಾತ್ರೆಯು ಸಾಗಲಿದೆ.
ರೈತರು ಮತ್ತು ಕ್ರೀಡಾಪಟುಗಳನ್ನು ರಾಹುಲ್ ಭೇಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಅನೇಕರನ್ನು ಭೇಟಿಯಾಗುತ್ತಿದ್ದಾರೆ. ಅದರಂತೆ ಇಂದು ರೈತರನ್ನು ಭೇಟಿ ಮಾಡಿ ಪ್ರಸ್ತುತ ರೈತರ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಕೃಷ್ಣ ಪೂನಿಯಾ, ದಿವ್ಯಾಂಶ್ ಪವಾರ್, ಭೂಪೇಂದ್ರ ಸಿಂಗ್ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದಾರೆ.
ಲಾಲ್ಸೋಟ್‌ನಲ್ಲಿ ರಾಹುಲ್ಗೆ ವಿಶೇಷ ಸ್ವಾಗತ: ದೌಸಾ ಜಿಲ್ಲೆಯ ಲಾಲ್ಸೋಟ್‌ನಲ್ಲಿ ರಾಹುಲ್ ಗಾಂಧಿಯನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಲಾಯಿತು. ಈ ವೇಳೆ, ಗ್ರಾಮಸ್ಥರು ಸಾಂಪ್ರದಾಯಿಕ ವೇಷಭೂಷಣ ಧರಿಸಿ ಕುಣಿದು ಕುಪ್ಪಳಿಸಿ ಕೈ ನಾಯಕನ್ನು ಬರಮಾಡಿಕೊಂಡರು. ಅಲ್ಲದೇ ರಾಜಸ್ಥಾನಿ ಶೈಲಿಯಲ್ಲಿ ಹಳದಿ ನಿಲುವಂಗಿ ಧರಿಸಿದ ಮಹಿಳೆಯರು ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ್ದು ಗಮನಾರ್ಹ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಯಲ್ಲಿ ಮಹಿಳಾ ಶಕ್ತಿ ಪ್ರದರ್ಶನ; ಗಮನ ಸೆಳೆದ ಪ್ರಿಯಾಂಕಾ ಪುತ್ರಿ