ನವದೆಹಲಿ: ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ನಿವೃತ್ತ ಸಿಬ್ಬಂದಿಗೆ ಬಹುದೊಡ್ಡ ರಿಲೀಫ್ ಸಿಕ್ಕಿದೆ. ಕತಾರ್ ನ್ಯಾಯಾಲಯವು ಇವರ ಶಿಕ್ಷೆಯನ್ನು ಕಡಿತಗೊಳಿಸಿದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
''ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಕತಾರ್‌ನ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ನಾವು ಗಮನಿಸಿದ್ದೇವೆ. ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ವಿವರವಾದ ತೀರ್ಪನ್ನು ನಿರೀಕ್ಷಿಸಲಾಗುತ್ತಿದೆ'' ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
''ಕತಾರ್‌ನಲ್ಲಿರುವ ನಮ್ಮ ರಾಯಭಾರಿ ಮತ್ತು ಇತರ ಅಧಿಕಾರಿಗಳು ಕುಟುಂಬ ಸದಸ್ಯರೊಂದಿಗೆ ಇಂದು ಮೇಲ್ಮನವಿ ನ್ಯಾಯಾಲಯದಲ್ಲಿ ಹಾಜರಿದ್ದರು. ನಾವು ವಿಷಯದಲ್ಲಿ ಆರಂಭದಿಂದಲೂ ಕುಟುಂಬಸ್ಥರ ಬೆಂಬಲಕ್ಕೆ ನಿಂತಿದ್ದೇವೆ. ನಾವು ಎಲ್ಲಾ ರೀತಿಯ ಕಾನ್ಸುಲರ್ ಮತ್ತು ಕಾನೂನು ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ. ಈ ವಿಷಯದ ಕುರಿತಾಗಿ ಕತಾರ್ ಅಧಿಕಾರಿಗಳೊಂದಿಗೆ ಸಂಪರ್ಕ ಮುಂದುವರಿಸುತ್ತೇವೆ'' ಎಂದು ಸಚಿವಾಲಯವು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
''ವಿವರವಾದ ತೀರ್ಪಿಗೆ ಕಾಯಲಾಗುತ್ತಿದೆ. ಮುಂದಿನ ಕ್ರಮಗಳನ್ನು ನಿರ್ಧರಿಸಲು ನಾವು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲೂ ಇದ್ದೇವೆ'' ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ನೌಕಾಪಡೆಯ ಮಾಜಿ ಸಿಬ್ಬಂದಿಗೆ ಕತಾರ್ ಮರಣದಂಡನೆ; ಮೇಲ್ಮನವಿ ಸಲ್ಲಿಸಿದ ಭಾರತ