ಡೆಹ್ರಾಡೂನ್ (ಉತ್ತರಾಖಂಡ್): ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅವರು ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಧಾಮಿ ಅವರಿಗೆ ಬಿಜೆಪಿ ಮಣೆ ಹಾಕಿದೆ.
ರಾಜಧಾನಿ ಡೆಹ್ರಾಡೂನ್ನಲ್ಲಿ ಸೋಮವಾರ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿತ್ತು. ಇದರಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬುಧವಾರ ಮುಖ್ಯಮಂತ್ರಿಯಾಗಿ ಧಾಮಿ ಪದಗ್ರಹಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯುವ ನಾಯಕರಾದ ಪುಷ್ಕರ್ ಸಿಂಗ್ ಧಾಮಿ ವಿಧಾನಸಭೆ ಚುನಾವಣೆಯಲ್ಲಿ ಖತೀಮಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆದ್ದರಿಂದ ಹೊಸಬರಿಗೆ ಬಿಜೆಪಿ ಮಣೆ ಹಾಕಲಿದೆ ಎಂಬ ನಿರೀಕ್ಷೆ ಇತ್ತು. ಶಾಸಕರಾದ ಸತ್ಪಾಲ್ ಮಹಾರಾಜ್, ಧನ್ಸಿಂಗ್ ರಾವತ್, ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಅವರ ಹೆಸರುಗಳು ಸಹ ಸಿಎಂ ರೇಸ್ಗೆ ಕೇಳಿ ಬಂದಿದ್ದವು. ಆದರೆ, ಕೊನೆಗೆ 10 ದಿನಗಳ ಕಾಲ ನಡೆದ ಕಸರತ್ತಿಗೆ ಬಿಜೆಪಿ ತೆರೆ ಎಳೆದಿದೆ.
ಕೇಂದ್ರದ ವೀಕ್ಷಕರಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಧಾಮಿ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವೆರಿಸಲು ತೀರ್ಮಾನಿಸಲಾಗಿದೆ. ಹೊಸ ಸಿಎಂ ಆಯ್ಕೆ ಬಳಿಕ ಮಾತನಾಡಿದ ರಾಜನಾಥ್ ಸಿಎಂ, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಪುಷ್ಕರ್ ಸಿಂಗ್ ಧಾಮಿ ಅಭಿನಂದನೆ ಸಲ್ಲಿಸುತ್ತೇನೆ. ಅವರ ನಾಯಕತ್ವದಲ್ಲಿ ಉತ್ತರಾಖಂಡ್ ವೇಗವಾದ ಅಭಿವೃದ್ದಿ ಹೊಂದುವ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ಸಿಎಂ ಆಗಿ ಬಿರೇನ್ ಸಿಂಗ್ ಪ್ರಮಾಣ: ಭ್ರಷ್ಟಾಚಾರ ಮುಕ್ತ ರಾಜ್ಯದ ಪಣ