ತಮಿಳುನಾಡು: ಕೊಯಮತ್ತೂರಿನಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ (ಐಟಿ) ಕೆಲಸ ಮಾಡುತ್ತಿರುವ ಉದ್ಯೋಗಿಯೋರ್ವರು ಎರಡು ಕಾಲುಗಳು ಕತ್ತರಿಸಿ ಹೋದ ನಾಯಿಮರಿಯನ್ನು ದತ್ತು ಪಡೆದು ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಗಾಯತ್ರಿ ಎನ್ನುವವರು ತಮ್ಮ ತಂದೆಯ ಸಹಾಯದಿಂದ ನಾಯಿಮರಿಯನ್ನು ದತ್ತು ಪಡೆದಿದ್ದು, ಅದಕ್ಕೆ ‘ವೀರಾ’ ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ ನಾಯಿಯ ಹಿಂಬದಿಯ ಎರಡು ಕಾಲುಗಳು ಕತ್ತರಿಸಿ ಹೋಗಿದ್ದು, ಕೃತಕ ಕಾಲಿನಿಂದ ಹಗುರವಾದ ಗಾಲಿ ಕುರ್ಚಿಯನ್ನು ವಿನ್ಯಾಸಗೊಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಗಾಯತ್ರಿ, ನಾನು ಮನೆಯಲ್ಲಿ ನಾಯಿ ಸಾಕುವ ಆಸೆ ಹೊಂದಿದ್ದೆ. ಕೊರೊನಾ ಹಿನ್ನೆಲೆ ನನಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಂತರ ನಾವು ಸಿರಣಾಯಕನ್ಪಾಲಯಂ ಪ್ರದೇಶದ ಖಾಸಗಿ ಸಂಸ್ಥೆಯೊಂದರಿಂದ ಪೊಮೆರಿಯನ್ ನಾಯಿಮರಿಯನ್ನು ದತ್ತು ಪಡೆದಿದ್ದೇವೆ. ನಾಯಿಮರಿಯ ಹಿಂಭಾಗದ ಎರಡೂ ಕಾಲುಗಳು ಕತ್ತರಿಸಿ ಹೋದ ಪರಿಣಾಮ ನಡೆದುಕೊಂಡು ಹೋಗುವುದು ತುಂಬಾ ಕಷ್ಟಕರವಾಗಿತ್ತು. ಈ ಹಿನ್ನೆಲೆ ಪರ್ಯಾಯ ವಿಧಾನ ಅಂದ್ರೆ ಪಿವಿಸಿ ಪೈಪ್ ಬಳಸಿ ಕೃತಕ ಕಾಲು ತಯಾರಿಸಲಾಗಿದ್ದು, ಜೊತೆಗೆ ಒಂದು ಎತ್ತಿನ ಗಾಡಿಯಂತೆ ಗಾಲಿ ಕುರ್ಚಿಯನ್ನು ತಯಾರಿಸಿದ್ದೇವೆ. ಈ ಮೂಲಕ ವೀರಾ ನಿಧಾನವಾಗಿ ನಡೆದಾಡುತ್ತಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.