ಪಠಾಣ್‌ಕೋಟ್ (ಪಂಜಾಬ್): ಪಂಜಾಬಿಯತ್ ಎಂದರೆ ಸರ್ವಶಕ್ತನನ್ನು ಹೊರತುಪಡಿಸಿ ಯಾರ ಮುಂದೆಯೂ ತಲೆಬಾಗದ ಭಾವನೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಫೆ.20ರಂದು ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆ ಪಠಾಣ್ಕೋಟ್ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದರು. ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ(ಎಎಪಿ) ಎರಡೂ ಪಕ್ಷಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ನಿಂದ ಹೊರಹೊಮ್ಮಿವೆ. ಮೋದಿ-ಕೇಜ್ರಿವಾಲ್ ಇಬ್ಬರೂ ಬಡೇ ಮಿಯಾನ್ ಛೋಟೆ ಮಿಯಾನ್ ಇದ್ದಂತೆ ಎಂದು ವ್ಯಂಗ್ಯವಾಡಿದರು.
ನಿನ್ನೆ ಚುನಾವಣಾ ಪ್ರಚಾರಕ್ಕಾಗಿ ಪಿಎಂ ಮೋದಿ ಪಠಾಣ್ಕೋಟ್ಗೆ ಬಂದಿದ್ದರು. ಆದರೆ, ತಮ್ಮ ನಿವಾಸದಿಂದ 5-6 ಕಿಮೀ ಪ್ರಯಾಣಿಸಿ ರೈತರನ್ನು ಭೇಟಿ ಮಾಡಲು ಅವರಿಂದ ಸಾಧ್ಯವಾಗಲಿಲ್ಲ.
ಅಮೆರಿಕ, ಕೆನಡಾಕ್ಕೆ ಭೇಟಿ ನೀಡಿದರು, ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಮತ್ತು 16,000 ಕೋಟಿ ರೂಪಾಯಿ ಮೌಲ್ಯದ ಎರಡು ಚಾಪರ್‌ಗಳನ್ನು ಖರೀದಿಸಿದರು. ಒಂದು ವರ್ಷ ಇದೇ ರೈತರನ್ನು ಪ್ರತಿಭಟಿಸುವಂತೆ ಮಾಡಿದ್ದವರಿಗೆ ಈಗ ಅವರನ್ನು ಭೇಟಿ ಮಾಡಲಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿಯ ನಕಲಿ ರಾಷ್ಟ್ರೀಯತೆ, ಒಡೆದು ಆಳುವ ನೀತಿಯಿಂದ ಸಮಾಜ ವಿಘಟನೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ
ಪಂಜಾಬ್ ರೈತರ ಕಬ್ಬಿನ 14,000 ಕೋಟಿ ರೂಪಾಯಿಗಳ ಬಾಕಿ ಮೊತ್ತವನ್ನು ಇನ್ನೂ ಪಾವತಿಸಿಲ್ಲ. ಧರಣಿ ನಿರತ ರೈತರನ್ನು ಒಮ್ಮೆಯೂ ಭೇಟಿ ಮಾಡಿರಲಿಲ್ಲ. ಬದಲಿಗೆ, ಬಿಜೆಪಿಯ ಸಚಿವರ ಮಗನ ಕಾರನ್ನು ರೈತರ ಮೇಲೆ ಹರಿಸುವಂತೆ ಮಾಡಿದ್ದರು.
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಪಂಜಾಬ್‌ನ ಜನರಿಗೆ, ವಿಶೇಷವಾಗಿ ಸಣ್ಣ ಅಥವಾ ಮಧ್ಯಮ ವ್ಯವಹಾರಗಳನ್ನು ನಡೆಸುವ ಜನರಿಗೆ ಯಾವುದೇ ಸಹಕಾರವನ್ನು ನೀಡಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಪ್ರಿಯಾಂಕಾ ಕಿಡಿಕಾರಿದರು.