ನವದೆಹಲಿ : ಕ್ಯಾಪ್ಟನ್ ಅಮರೀಂದರ್ ಸಿಂಗ್ ಉತ್ತರಾಧಿಕಾರಿಯಾಗಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿದ್ದಾರೆ. ಈ ಮೂಲಕ ಚನ್ನಿ ಪಂಜಾಬ್‌ನ ಮೊದಲ ದಲಿತ ಸಿಎಂ ಶ್ರೇಯಕ್ಕೆ ಪಾತ್ರವಾಗಲಿದ್ದಾರೆ.
ಚನ್ನಿ ಶಾಸಕಾಂಗ ಸಭೆಯಲ್ಲಿ ಸಿಎಲ್ಪಿ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು. 2022ರಲ್ಲಿ ಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಕಾಂಗ್ರೆಸ್ ಹೈಕಮಾಂಡ್ ದಲಿತ-ಸಿಖ್ ನಾಯಕನಿಗೆ ಮಣೆ ಹಾಕಿದೆ.
ಚರಣಜಿತ್ ಸಿಂಗ್ ಚನ್ನಿ ಯಾರು? : ಪಂಜಾಬ್‌ನ ಮೊದಲ ದಲಿತ ಸಿಎಂ 58 ವರ್ಷದ ಚನ್ನಿ ಅವರು, ರಾಜ್ಯ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಅವರು ರಾಮದಾಸಿಯಾ ಸಿಖ್ ಸಮುದಾಯಕ್ಕೆ ಸೇರಿದವರು. ಚಮಕೌರ್ ಸಾಹಿಬ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ 2015ರಿಂದ 2016ರವರೆಗೆ ಚರಣ್ಜಿತ್ ಸಿಂಗ್ ಚನ್ನಿ, ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಮಾರ್ಚ್ 16, 2017ರಂದು ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿ ನೇಮಕಗೊಂಡರು. ಅವರು ಮೂರು ಅವಧಿಗೆ ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಎರಡು ಅವಧಿಗೆ ಮುನ್ಸಿಪಲ್ ಕೌನ್ಸಿಲ್ ಖರಾರ್ ಅಧ್ಯಕ್ಷರಾಗಿದ್ದರು. ಅವರು 2007ರಲ್ಲಿ ಮೊದಲ ಬಾರಿಗೆ ಪಂಜಾಬ್ ವಿಧಾನಸಭೆಗೆ ಆಯ್ಕೆಯಾದರು.
ಬಾಲ್ಯದಲ್ಲಿ ‘ಟೆಂಟ್ ಬಾಯ್’ಆಗಿ ಕೆಲಸ : ಏಪ್ರಿಲ್ 2, 1972ರಂದು ಚಮ್ಕೌರ್ ಸಾಹಿಬ್ ಬಳಿಯ ಮ್ಯಾಕ್ರೋನಾ ಕಲಾನ್ ಗ್ರಾಮದಲ್ಲಿ ಜನಿಸಿದ ಚರಣಜಿತ್ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಪಡೆದರು. ಅವರ ತಂದೆ ಎಸ್ ಹರ್ಸಾ ಸಿಂಗ್ ಮತ್ತು ತಾಯಿ ಅಜ್ಮೀರ್ ಕೌರ್ ದಂಪತಿಯ ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರು.
ಅವರ ತಂದೆ ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ತರಲು ಸಾಕಷ್ಟು ಕಷ್ಟಪಟ್ಟರು, ಅದಕ್ಕಾಗಿ ಅವರು ಮಲೇಷಿಯಾಗೆ ವಲಸೆ ಹೋದರು. ಕಷ್ಟಪಟ್ಟು ಕೆಲಸ ಮಾಡಿ ಉದ್ಯಮಗಳಲ್ಲಿ ಯಶಸ್ವಿಯಾದರು. ಬಳಿಕ ಮಲೇಷಿಯಾದಿಂದ ಅವರು ಮರಳಿದರು. ಖರಾರ್ ಪಟ್ಟಣದಲ್ಲಿ ಟೆಂಟ್ ಹೌಸ್‌ನ ವ್ಯಾಪಾರವನ್ನು ಪ್ರಾರಂಭಿಸಿದರು. ಅಲ್ಲಿ ಚರಣ್ಜಿತ್ ಸಿಂಗ್ ಚನ್ನಿ ಕೂಡ ‘ಟೆಂಟ್ ಬಾಯ್’ಆಗಿ ಕೆಲಸ ಮಾಡಿದರು.
ಓದಿ: ಪಂಜಾಬ್ 'ಪವರ್' ಪ್ಲೇ! ನೂತನ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಚನ್ನಿ ಅಚ್ಚರಿಯ ಆಯ್ಕೆ