ಚಂಡಿಗಢ (ಪಂಜಾಬ್): ಒಳ ಉಡುಪು ಜಾಹೀರಾತೊಂದರಲ್ಲಿ ಅಶ್ಲೀಲ ಮತ್ತು ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಡಾಲರ್ ಕಂಪನಿ ವಿರುದ್ಧ ದೂರು ದಾಖಲಾಗಿದೆ.
ಪಂಜಾಬ್ - ಹರಿಯಾಣ ಹೈಕೋರ್ಟ್ನ ವಕೀಲ ಹೆಚ್ ಸಿ ಅರೋರಾ ಅವರು ಅಕ್ಷಯ್ ಕುಮಾರ್ ಹಾಗೂ ಆ ಕಂಪನಿ ವಿರುದ್ಧ ಪಂಜಾಬ್ ರಾಜ್ಯ ಮಹಿಳಾ ಆಯೋಗ ಮತ್ತು ಭಾರತೀಯ ಜಾಹೀರಾತು ಮಾನದಂಡ ಮಂಡಳಿ (ASCI)ಗೆ ದೂರು ನೀಡಿದ್ದಾರೆ.
ಒಳ ವಸ್ತ್ರ ತಯಾರಕ ಕಂಪನಿಯ ಬಿಗ್ ಬಾಸ್ ಪ್ರೀಮಿಯಂ ಇನ್ನರ್ ವಿಯರ್ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಅಲ್ಲಿ ಬಳಸಿರುವ ಸಂಭಾಷಣೆ ಅಶ್ಲೀಲವಾಗಿದೆ ಮತ್ತು ಡಬಲ್ ಮೀನಿಂಗ್ ನೀಡುತ್ತದೆ. ಇದು ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತದೆ ಹಾಗೂ ಪ್ರತಿ ಅರ್ಧಗಂಟೆಯ ನಂತರ ಈ ಜಾಹೀರಾತು ಪುನರಾವರ್ತನೆಯಾಗುತ್ತದೆ. ತಮ್ಮ ಹೆಣ್ಣು ಮಕ್ಕಳೊಂದಿಗೆ ಟಿವಿ ನೋಡುತ್ತಿರುವ ಪೋಷಕರಿಗೆ ತುಂಬಾ ಮುಜುಗರದ ಸಂಗತಿಯಾಗಿದೆ. ಈ ಜಾಹೀರಾತನ್ನು ತಕ್ಷಣವೇ ನಿಲ್ಲಿಸಬೇಕೆಂದು ಅರೋರಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಈ ಜಾಹೀರಾತನ್ನು ಪ್ರಸಾರ ಮಾಡುವ ಚಾನೆಲ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ಷಯ್ ಕುಮಾರ್ ಹಾಗೂ ಡಾಲರ್ ಕಂಪನಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅರೋರಾ ಒತ್ತಾಯಿಸಿದ್ದಾರೆ.