ನವದೆಹಲಿ: ಮಣ್ಣಿನ ಮಗ, ರೈತರ ಪರ ಹೋರಾಡುತ್ತಲೇ ಬಂದಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಪಂಜಾಬ್ ರೈತರೊಬ್ಬರು ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಅತ್ಯುತ್ತಮ ಭತ್ತದ ತಳಿವೊಂದಕ್ಕೆ ಪಂಜಾಬ್‌ನ ರೈತರು 'ದೇವೇಗೌಡ' ಎಂದು ಹೆಸರಿಟ್ಟಿದ್ದಾರೆ.
ಸದನದ ಒಳಗೆ ಮತ್ತು ಹೊರಗೆ ರೈತ ಸಮುದಾಯದ ಪರ ಹೆಚ್.ಡಿ ದೇವೇಗೌಡರಿಗೆ ಇರುವ ಬದ್ಧತೆಯ ಗೌರವಾರ್ಥವಾಗಿ ಅವರ ಹೆಸರನ್ನೇ ಇಟ್ಟಿದ್ದಾರಂತೆ. ಗೌಡರು ಶಾಸಕರಾಗಿ, ಸಂಸದರಾಗಿ ಯಾವತ್ತೂ ಸದನದ ಶಿಷ್ಟಾಚಾರ ಉಲ್ಲಂಘಿಸಿಲ್ಲ. ಆದರೆ ರೈತರ ಹಿತಕ್ಕೆ ಬೆದರಿಕೆ ಬಂದಾಗ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಒಮ್ಮೆ ಮಾತ್ರ ಈ ಸ್ವಯಂ ಪ್ರೇರಿತ ತತ್ವವನ್ನು ಉಲ್ಲಂಘಿಸಿದ್ದರು ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ತಮ್ಮ 'ಫುರೋಸ್ ಇನ್ ಎ ಫೀಲ್ಡ್: ದಿ ಅನ್‌ಎಕ್ಸ್‌ಪ್ಲೋರ್ಡ್ ಲೈಫ್ ಆಫ್' (Furrows in a Field: The Unexplored Life of) ಪುಸ್ತಕದಲ್ಲಿ ಬರೆದಿದ್ದಾರೆ.
1991ರ ಜುಲೈ 31 ಮತ್ತು ಆಗಸ್ಟ್ 1ರ ಘಟನೆಯನ್ನು ಉಲ್ಲೇಖಿಸಿದ್ದು, ಮನಮೋಹನ್ ಸಿಂಗ್ ಅವರ ಮೊದಲ ಬಜೆಟ್ ಮೇಲಿನ ಬಿಸಿ ಚರ್ಚೆಯ ಸಂದರ್ಭದಲ್ಲಿ, ರೈತರಿಗೆ ಸಬ್ಸಿಡಿಗಳನ್ನು ಕೊನೆಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ದೇವೇಗೌಡರು ಹೇಗೆ ಸದನದ ಬಾವಿಗಿಳಿದಿದ್ದರು ಎಂಬುದನ್ನು ಪುಸ್ತಕದಲ್ಲಿ ಬರೆಯಲಾಗಿದೆ.
ನಾನೊಬ್ಬ ರೈತ, ಉಳುವವನ ಮಗನಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ. ಧರಣಿ ಕೂರುತ್ತೇನೆ, ಸದನದಿಂದ ಹೊರಗೆ ಹೋಗುವುದಿಲ್ಲ. ಇದನ್ನು ಪ್ರಚಾರಕ್ಕಾಗಿ ಮಾಡುತ್ತಿಲ್ಲ ಎಂದು ಹೇಳಿದ್ದರು. 2002ರಲ್ಲಿ ಭಾರತದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆಗಳು ವರದಿಯಾದಾಗ ಹೆಚ್ಡಿಡಿ ಕರ್ನಾಟಕದಿಂದ ಸುಮಾರು 2,000 ರೈತರ ನಿಯೋಗವನ್ನು ರೈಲಿನಲ್ಲಿ ದೆಹಲಿಗೆ ಕರೆದೊಯ್ದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿಸಿದ್ದರು.
ಇದೊಂದು ಅಭೂತಪೂರ್ವ ವಿಶೇಷವಾಗಿ ಮಾಜಿ ಪ್ರಧಾನಿಯೊಬ್ಬರು ಈ ರೀತಿಯ ಪ್ರತಿಭಟನೆ ದೆಹಲಿ ಜನರನ್ನು ದಿಗ್ಭ್ರಮೆಗೊಳಿಸಿತ್ತು ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿದ ಪುಸ್ತಕದಲ್ಲಿ ಹೇಳಲಾಗಿದೆ. ರೈತರ ಪರ ಗೌಡರಿಗಿದ್ದ ಬದ್ಧತೆಗಾಗಿ ಪಂಜಾಬ್‌ನ ರೈತರು ಅತ್ಯುತ್ತಮ ಭತ್ತದ ತಳಿಗಳಲ್ಲಿ ಒಂದಕ್ಕೆ ಗೌಡರ ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ 'ಸಿದ್ದ'ಸೂತ್ರಧಾರ?: ಹೆಚ್ಡಿಕೆ