ಶಾಸಕರು ಎಷ್ಟು ಬಾರಿ ಗೆದ್ದರೂ ಒಂದೇ ಅವಧಿಗೆ ಪಿಂಚಣಿ: ಪಂಜಾಬ್ ಸಿಎಂ ಮಹತ್ವದ ನಿರ್ಧಾರ - ಶಾಸಕರ ಪಿಂಚಣಿಗೆ ಪಂಜಾಬ್ ಸಿಎಂ ಕತ್ತರಿ
ಭ್ರಷ್ಟರು, ಮಾಜಿ ಶಾಸಕರು ಹಾಗೂ ಸಚಿವರಿಗೆ ಈಗಾಗಲೇ ಬಿಸಿ ಮುಟ್ಟಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಚಂಡೀಗಢ(ಪಂಜಾಬ್): ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಒಂದಿಲ್ಲೊಂದು ಮಹತ್ವದ ನಿರ್ಧಾರ ಕೈಗೊಳ್ಳುತ್ತಿರುವ ಭಗವಂತ್ ಮಾನ್ ಇದೀಗ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. ಶಾಸಕರ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿರುವ ಅವರು, ಎಷ್ಟೇ ಸಲ ಆಯ್ಕೆಯಾದ್ರೂ ಕೂಡ ಇನ್ಮುಂದೆ ಶಾಸಕರು ಒಂದೇ ಸಲ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಕೇವಲ ಒಂದು ಅವಧಿಗೆ ಮಾತ್ರ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರಿಗೆ ಜೀವನಪರ್ಯಂತ ಪಿಂಚಣಿ ಹಣ ನೀಡಲಾಗುತ್ತದೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಈ ಸಂಪ್ರದಾಯ ಜಾರಿಯಲ್ಲಿದೆ. ಆದರೆ, ಪಂಜಾಬ್ನಲ್ಲಿ ಭಗವಂತ್ ಮಾನ್ ಸರ್ಕಾರ ಈ ಯೋಜನೆಗೆ ಕಡಿವಾಣ ಹಾಕಲು ಮುಂದಾಗಿದೆ. ಇನ್ಮುಂದೆ, ಶಾಸಕರು ಎಷ್ಟು ಬಾರಿ ಗೆದ್ದರೂ ಕೂಡ ಒಂದೇ ಅವಧಿಗೆ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಭಗವಂತ್ ಮಾನ್ ಮಾಹಿತಿ ನೀಡಿದರು.
ಜನರ ಸೇವೆ ಮಾಡುವ ಹೆಸರಿನಲ್ಲಿ ಶಾಸಕರು ರಾಜಕೀಯಕ್ಕೆ ಬಂದರೆ ಅವರಿಗೆ ಲಕ್ಷ ಲಕ್ಷ ರೂಪಾಯಿ ಪಿಂಚಣಿ ನೀಡುವುದು ಸಮರ್ಥನೀಯವಲ್ಲ. ಗೆಲುವು ಸಾಧಿಸುವ ಉದ್ದೇಶದಿಂದ ಜನರ ಮುಂದೆ ಹೋಗಿ ಮತ ಪಡೆದುಕೊಳ್ಳಲು ಕೈಮುಗಿಯುತ್ತಾರೆ. ಜೊತೆಗೆ ಅವರ ಸೇವೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ, ಚುನಾವಣೆಯಲ್ಲಿ ಸೋತರೂ ಕೂಡ 3ರಿಂದ 5 ಲಕ್ಷದವರೆಗೆ ಪಿಂಚಣಿ ಹಣ ಪಡೆದುಕೊಳ್ಳುತ್ತಾರೆ. ಇದು ಪಂಜಾಬ್ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಇನ್ಮುಂದೆ ಈ ಯೋಜನೆ ಜಾರಿಯಲ್ಲಿರುವುದಿಲ್ಲ ಎಂದು ಅವರು ತಿಳಿಸಿದರು.
ಇತರೆ ಪಿಂಚಣಿ ಕೂಡ ಕಡಿತ: ರಾಜ್ಯದಲ್ಲಿ ಕೆಲ ಶಾಸಕರು ಹೆಚ್ಚಿನ ಪಿಂಚಣಿ ಹಣ ಪಡೆದುಕೊಳ್ಳುತ್ತಿದ್ದಾರೆ. ಇದು ನೇರವಾಗಿ ರಾಜ್ಯದ ಖಜಾನೆಗೆ ಹೊರೆಯಾಗುತ್ತಿದೆ. ಹೀಗಾಗಿ ಇದರ ಮೇಲೆ ಕಡಿವಾಣ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪಿಂಚಣಿಯಿಂದ ಉಳಿದುಕೊಳ್ಳುವ ಕೋಟ್ಯಂತರ ಹಣ ಜನರ ಕಲ್ಯಾಣಕ್ಕಾಗಿ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಭಗವಂತ್ ಮಾನ್: ₹50,000 ಕೋಟಿ ಪ್ಯಾಕೇಜ್ ಬೇಡಿಕೆ
ಸಾಲದ ಸುಳಿಯಲ್ಲಿ ಪಂಜಾಬ್: ಪಂಜಾಬ್ ಸದ್ಯ 3 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿದೆ. ಪಂಜಾಬ್ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದು, ನಮಗೆ ಕೇಂದ್ರದ ನೆರವು ಬೇಕಾಗಿದೆ. ಪ್ರಧಾನಿ ಮೋದಿ ಅವರಿಗೆ ಈ ಬಗ್ಗೆ ಮನದಟ್ಟು ಮಾಡಲಾಗಿದೆ ಎಂದು ತಿಳಿಸಿದ್ದು, 50,000 ಸಾವಿರ ಕೋಟಿ ರೂ.ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿರುವುದಾಗಿ ಭಗವಂತ್ ಮಾನ್ ಹೇಳಿದರು.