ನವದೆಹಲಿ : ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ 'ಮಿಷನ್ ಕ್ಲೀನ್' ಯೋಜನೆ ಘೋಷಿಸಿದ್ದಾರೆ.
ಸಭೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳುವಂತೆ ಮತ್ತು ಮರಳು, ಡ್ರಗ್ಸ್ ಮತ್ತು ಮದ್ಯದ ಮಾಫಿಯಾ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಡ್ರಗ್, ಮರಳು ಮತ್ತು ಮದ್ಯದ ಮಾಫಿಯಾ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ 'ಮಿಷನ್ ಕ್ಲೀನ್' ಅನ್ನು ಪ್ರಾರಂಭಿಸಲು ಮುಖ್ಯಮಂತ್ರಿ ಚರಂಜಿತ್ ಚನ್ನಿ ಅವರು ರಾಜ್ಯದ ಸಿವಿಲ್ ಮತ್ತು ಪೊಲೀಸ್ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಮರಳು ಮತ್ತು ಜಲ್ಲಿಯು ಮಾರುಕಟ್ಟೆಯಲ್ಲಿ ಸರ್ಕಾರಿ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲು ಗಣಿಗಾರಿಕೆ ಇಲಾಖೆಗೆ ಸೂಚಿಸಿದ ಮುಖ್ಯಮಂತ್ರಿಗಳು, ಡಿಸಿಗಳು ಮತ್ತು ಎಸ್‌ಎಸ್‌ಪಿಗಳಿಗೆ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ.
ಪಂಚಾಯತ್‌ಗಳು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುತ್ತಿರುವ ಮರಳಿಗೆ ಯಾವುದೇ ಶುಲ್ಕ ವಿಧಿಸದಂತೆ ಗಣಿಗಾರಿಕೆ ಇಲಾಖೆಗೆ ಸೂಚಿಸಿದರು ಹಾಗೆ ದೀಪಾವಳಿಗೆ ಮುಂಚಿತವಾಗಿ ಅಂಗಡಿಯವರಿಗೆ ಅನುಕೂಲವಾಗುವಂತೆ ಮತ್ತು ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಕ್ಷಣದಿಂದ ಅಂಗಡಿ ಮಾಲೀಕರು ದೀಪಾವಳಿಯನ್ನು ಆನಂದಿಸಬೇಕು. ಅವರಿಗೆ ಆ ರೀತಿಯ ಅನುಕೂಲ ಮಾಡಿಕೊಡಬೇಕು ಮತ್ತು ಯಾವುದೇ ಹಂತದಲ್ಲೂ ಕಿರುಕುಳವನ್ನು ಸಹಿಸುವುದಿಲ್ಲ ಎಂದಿದ್ದಾರೆ.