ಚಂಡೀಗಢ: ಪಂಜಾಬ್ ಸರ್ಕಾರದಲ್ಲೂ ಕಮಿಷನ್ ವಿಚಾರ ಸದ್ದು ಮಾಡಿದೆ. ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಇದೇ ಕಾರಣಕ್ಕೆ ಮುಖ್ಯಮಂತ್ರಿ ಭಗವಂತ್ ಮಾನ್ ಸಚಿವ ಸಂಪುಟದಿಂದ ವಜಾ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ. ಭ್ರಷ್ಟಾಚಾರ ಆರೋಪದ ಮೇಲೆ ಸಚಿವರ ಮೊದಲ ತಲೆದಂಡವಾಗಿದ್ದು, ಸಂಪುಟದಿಂದ ಕಿತ್ತು ಹಾಕುತ್ತಿದ್ದಂತೆ ಪಂಜಾಬ್ ಪೊಲೀಸರು ಸಚಿವರನ್ನು ಬಂಧಿಸಿದ್ದಾರೆ.
ತಮ್ಮ ಇಲಾಖೆಯಲ್ಲಿ ಗುತ್ತಿಗೆ ಪಡೆದ ಅಧಿಕಾರಿಗಳಿಂದ ವಿಜಯ್ ಸಿಂಗ್ಲಾ ಶೇ.1ರಷ್ಟು ಕಮಿಷನ್ ಕೇಳಿದ್ದರು. ಈ ಕುರಿತಾಗಿ ಸಿಎಂ ಭಗವಂತ್ ಮಾನ್ ಅವರಿಗೆ ದೂರು ಬಂದಿತ್ತು. ಅಲ್ಲದೇ, ಬಲವಾದ ಸಾಕ್ಷ್ಯ ಕೂಡ ಲಭ್ಯವಾಗಿತ್ತು. ಆದ್ದರಿಂದ ಸಿಎಂ ಈ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಮಾದರಿಯಲ್ಲೇ ಮಾನ್ ಕೂಡ ಹೆಜ್ಜೆ ಇಟ್ಟಿದ್ಧಾರೆ.
ಮುಖ್ಯಮಂತ್ರಿಯೊಬ್ಬರು ತಮ್ಮ ಸಚಿವರ ವಿರುದ್ಧ ನೇರ ಕ್ರಮಕ್ಕೆ ಮುಂದಾಗಿರುವುದು ದೇಶದ ಇತಿಹಾಸದಲ್ಲಿ ಇದು ಎರಡನೇ ಬಾರಿಯಾಗಿದೆ. 2015ರಲ್ಲಿಕೇಜ್ರಿವಾಲ್ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಸಚಿವರೊಬ್ಬರನ್ನು ವಜಾಗೊಳಿಸಿದ್ದು, ದೇಶದ ಮೊದಲ ಪ್ರಕರಣವಾಗಿತ್ತು.
ಭ್ರಷ್ಟಾಚಾರ ಸಹಿಸುವುದಿಲ್ಲ: ಶೇಕಡಾ 1ರಷ್ಟು ಕೂಡ ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಎಂ ಮಾನ್ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಕೆಲದಿನಗಳಲ್ಲೇ ಭ್ರಷ್ಟಾಚಾರ ಕುರಿತು ಮಾಹಿತಿ ನೀಡುವಂತೆ ಜನರಿಗೆ ತನ್ನದೇ ವಾಟ್ಸಾಪ್ ನಂಬರ್ ನೀಡಿದ್ದರು. ರಾಜ್ಯದಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಅಥವಾ ಯಾರಾದರೂ ಲಂಚ ಕೇಳಿದರೆ ರಾಜ್ಯದ ಜನರು ವಾಟ್ಸಾಪ್ ನಂಬರ್‌ಗೆ ವಿಡಿಯೋ ಅಥವಾ ಆಡಿಯೋ ರೆಕಾರ್ಡ್ ಮಾಡಿ ನೇರವಾಗಿ ಕಳುಹಿಸಬಹುದು ಎಂದು ಸಿಎಂ ಮಾನ್ ತಿಳಿಸಿದ್ದರು.
ಇದನ್ನೂ ಓದಿ: ರಾಜಕೀಯ ವ್ಯವಹಾರಗಳ ಗುಂಪು, ಟಾಸ್ಕ್ ಫೋರ್ಸ್ ರಚಿಸಿದ ಸೋನಿಯಾ: ಇಬ್ಬರು ರೆಬಲ್ಗಳಿಗೂ ಸ್ಥಾನ