ಚಂಡೀಗಢ (ಪಂಜಾಬ್): ಪಂಜಾಬ್ನಲ್ಲಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲ ಒಂದು ರೀತಿಯ ಯೋಜನೆ ಜಾರಿಗೆ ತರುತ್ತಿದೆ. ಈ ಮೂಲಕ ಅಲ್ಲಿನ ಜನರಿಗೆ ಮತ್ತಷ್ಟು ಹತ್ತಿರವಾಗುವ ಕೆಲಸ ಮಾಡ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಪಂಜಾಬ್ನಲ್ಲಿ ಸರ್ಕಾರ ರಚನೆ ಮಾಡಿದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟದಲ್ಲೇ ಭಗವಂತ್ ಮಾನ್ ಸರ್ಕಾರ 25 ಸಾವಿರ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ಅಂಗೀಕಾರ ನೀಡಿತ್ತು. ಇದೀಗ ಸಿ ಮತ್ತು ಡಿ ಗ್ರೂಪ್ನ 35 ಸಾವಿರ ಹಂಗಾಮಿ ನೌಕರರನ್ನ ಖಾಯಂ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ತಕ್ಷಣವೇ ಗುತ್ತಿಗೆ ಮತ್ತು ಹೊರಗುತ್ತಿಗೆ ನೇಮಕಾತಿ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಭಗತ್ ಸಿಂಗ್ ಪುಣ್ಯತಿಥಿಯಂದು ಸರ್ಕಾರ ರಜೆ : ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಸ್ವಾತಂತ್ರ್ಯ ಹೋರಾಟ ಭಗತ್ ಸಿಂಗ್ ಅವರ ಪುಣ್ಯತಿಥಿಯಂದು ಮಾರ್ಚ್ 23ರಂದು ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸಿದ್ದಾರೆ.
ಈಗಾಗಲೇ ಭ್ರಷ್ಟಾಚಾರ ತಡೆಗೆ ರಾಜ್ಯದ ಜನರಿಗೆ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭ ಮಾಡಿರುವ ಆಮ್ ಆದ್ಮಿ, ಮೇಲಿಂದ ಮೇಲೆ ಹೊಸ ನಿರ್ಧಾರ ಕೈಗೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.
ರಾಜ್ಯದ ಮಾಜಿ ಸಚಿವರು, ಶಾಸಕರು ತಾವು ಉಳಿದುಕೊಂಡಿರುವ ಸರ್ಕಾರಿ ಬಂಗಲೆ, ಫ್ಲ್ಯಾಟ್ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಇದಕ್ಕೂ ಮೊದಲು ರಾಜ್ಯದಲ್ಲಿನ ವಿಐಪಿ ಸಂಸ್ಕೃತಿ ತೆಗೆದು ಹಾಕುವ ಉದ್ದೇಶದಿಂದ ಪ್ರಮುಖರಿಗೆ ನೀಡಲಾಗಿದ್ದ ಭದ್ರತೆ ವಾಪಸ್ ಪಡೆದುಕೊಂಡಿದ್ದಾರೆ.