ಪುಣೆ: ಕಳೆದ ಕೆಲವು ವರ್ಷಗಳಲ್ಲಿ, ಸಾವಿರಾರು ಅಪರಾಧಿಗಳನ್ನು ಪುಣೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಆದರೆ ಕೆಲ ಆರೋಪಿಗಳು ನಕಲಿ ದಾಖಲೆಗಳನ್ನು ನೀಡಿ ಜಾಮೀನು ಪಡೆದು ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ಪಡೆದ ಪುಣೆ ನಗರ ಪೊಲೀಸರು, ಈ ಸಂಬಂಧ 37 ಜನರನ್ನು ಬಂಧಿಸಿದ್ದಾರೆ.
ಈ ದಂಧೆ ಮಾಡುತ್ತಿದ್ದ 37 ಜನರು, ಇದುವರೆಗೆ 25 ಸಾವಿರಕ್ಕೂ ಹೆಚ್ಚು ಆರೋಪಿಗಳಿಗೆ ಜಾಮೀನು ಪಡೆಯಲು ಸಹಾಯ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಮಾಹಿತಿ ಪ್ರಕಾರ, "ಕೆಲ ಜನರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆಯಲು ರೂ. 20,000 ಮತ್ತು ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ನ್ಯಾಯಾಲಯದಿಂದ ಜಾಮೀನು ಪಡೆಯಲು 12,000 ರೂ. ಪಾವತಿ ಮಾಡುತ್ತಿದ್ದರು. ಈ ಎಲ್ಲಾ ಪ್ರಕ್ರಿಯೆ ನಡೆದ ಬಳಿಕ ನಕಲಿ ದಾಖಲೆಗಳನ್ನು ಪಡೆದು ಕೋರ್ಟ್ಗೆ ನೀಡುತ್ತಿದ್ದರು" ಎಂದು ಹೇಳಿದ್ದಾರೆ.
ಸದ್ಯ ಈ ಪ್ರಕರಣದ ಕುರಿತು ತನಿಖೆ ನಡೆಸಲು ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 27 ಟ್ರೈನಿ (ಪ್ರೊಬೇಷನರಿ) ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳು ಮತ್ತು 12 ಸಿಬ್ಬಂದಿ ಹೊಂದಿರುವ ವಿವಿಧ ತಂಡಗಳನ್ನು ರಚಿಸಲಾಗಿದೆ. ಶಿವಾಜಿನಗರ ನ್ಯಾಯಾಲಯದ ಗೇಟ್ ನಂ 4 ಮತ್ತು ಇತರ ಸ್ಥಳಗಳ ಬಳಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಆರು ಮಂದಿ ಮಹಿಳೆಯರು ಸೇರಿ ಒಟ್ಟು 37 ಜನರನ್ನು ಬಂಧಿಸಲಾಗಿದೆ.
ಆರೋಪಿಗಳು ಕಳೆದ ಎರಡು ವರ್ಷಗಳಿಂದ ಇಂತಹ ವ್ಯವಹಾರ ನಡೆಸುತ್ತಿದ್ದಾರೆ. ಕಳೆದ ವರ್ಷ ಪುಣೆ ಪೊಲೀಸರು ಇದೇ ರೀತಿಯ ಗ್ಯಾಂಗ್ ಅನ್ನು ಬಂಧಿಸಿದ್ದರು. ಅವರಲ್ಲಿ ನಾಲ್ಕರಿಂದ ಐದು ಮಂದಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ತಮ್ಮ ವ್ಯವಹಾರವನ್ನು ಪುನಾರಂಭಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಮತ್ತು ಜಂಟಿ ಆಯುಕ್ತ ರವೀಂದ್ರ ಶಿಸ್ವೆ, 'ಪ್ರಸ್ತುತ ನಾಲ್ಕರಿಂದ ಐದು ಗ್ಯಾಂಗ್‌ಗಳು ಈ ರೀತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಗ್ಯಾಂಗ್‌ನ ಮಾಸ್ಟರ್ ಮೈಂಡ್‌ಗಾಗಿ ಹುಡುಕಾಟ ನಡೆಯುತ್ತಿದೆ. ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ತನಿಖೆ ಮುಂದುವರಿಯುತ್ತದೆ' ಎಂದಿದ್ದಾರೆ.
ಆಧಾರ್ ಕಾರ್ಡ್, ಸ್ಯಾಲರಿ ಸ್ಲಿಪ್, ಕಂಪನಿಗಳ ಗುರುತಿನ ಚೀಟಿ, 7/12 ಜಮೀನು ತೆಗೆಯುವಿಕೆ ಮುಂತಾದ ನಕಲಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.