ಪುಣೆ: ನಗರದ ಚಾಂದಿನಿ ಚೌಕ್ನಲ್ಲಿರುವ ಹಳೆಯ ಸೇತುವೆಯನ್ನ ಇಂದು ಮಧ್ಯರಾತ್ರಿ ನೆಲಸಮಗೊಳಿಸಲಾಗುತ್ತಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ. ಇಂದು ರಾತ್ರಿ 10 ಗಂಟೆಯಿಂದ ಚಾಂದಿನಿ ಚೌಕ್ ರಸ್ತೆಯ ಸಂಚಾರ ಸ್ಥಗಿತಗೊಳಿಸಿ, ಮಧ್ಯರಾತ್ರಿ 12 ಗಂಟೆ ಸುಮಾರಿಗೆ 600 ಕೆಜಿಯ ಸ್ಫೋಟಕ ಬಳಸಿ ಕೇವಲ 6 ಸೆಕೆಂಡಿನಲ್ಲಿ ಸೇತುವೆ ಕೆಡವಲಾಗುತ್ತಿದೆ.
ಕೆಲ ವರ್ಷಗಳಿಂದ ಈ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಮುಂಬೈನಿಂದ ಸತಾರಾ ಕಡೆಗೆ ಹೋಗುವ ಮತ್ತು ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆ ಈ ಸೇತುವೆ ಮೇಲೆ ದಿನೇ ದಿನೆ ಟ್ರಾಫಿಕ್ ಹೆಚ್ಚಾಗುತ್ತಿದೆ. ಇನ್ನು ಈ ರಸ್ತೆ ಮಾರ್ಗವಾಗಿ ಚಲಿಸುವವರು ಟ್ರಾಫಿಕ್ನಲ್ಲಿ ಸಿಲುಕಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇದೇ ಮಾರ್ಗವಾಗಿ ಚಲಿಸುವಾಗ ಟ್ರಾಫಿಕ್ನಲ್ಲಿ ಸಿಲುಕಿ ಪರದಾಡುವಂತಾಗಿತ್ತು. ನಿತ್ಯ ಇಲ್ಲಿನ ಟ್ರಾಫಿಕ್ಗೆ ಸಿಲುಕಿ ಸಾವಿರರು ಜನ ಪರದಾಡುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಈ ಹಿಂದೆಯೇ ಸೇತುವೆ ನೆಲಸಮ ಗೊಳಿಸಲು ಸಿದ್ದತೆ ನಡೆಸಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಟ್ರಾಫಿಕ್ ಜಾಮ್ ಸಮಸ್ಯೆ ಆದಷ್ಟು ಬೇಗ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.
ಇನ್ನು ಪುಣೆ-ಮುಂಬೈ ಹೆದ್ದಾರಿ ಸಂಚಾರವನ್ನ ನಾಳೆ ಬೆಳಗ್ಗೆ 10 ಗಂಟೆಯಿಂದ ಮುಚ್ಚಲಾಗುತ್ತಿದ್ದು, ಸತಾರಾದಿಂದ ಸಂಚಾರ ಸ್ಥಗಿತಗೊಳ್ಳಲಿದೆ. ಪುಣೆ - ಮುಂಬೈ ಹೆದ್ದಾರಿಯಿಂದ ಬರುವ ವಾಹನಗಳು ಇನ್ನು ಮುಂದೆ ಪುಣೆ ನಗರದಿಂದ ಖೇಡ್-ಶಿವಪುರ ಟೋಲ್ ಬೂತ್ ಮೂಲಕ ಹಾದು ಹೋಗಲಿದ್ದು,ಸತಾರಾ ಕಡೆಯಿಂದ ಬರುವ ವಾಹನಗಳು ತಾಳೆಗಾಂವ್ ದಭಾಡೆಯಿಂದ ನಿರ್ಗಮಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ನೋಯ್ಡಾದ ಅವಳಿ ಕಟ್ಟಡಗಳ ಮಾರುಕಟ್ಟೆ ಮೌಲ್ಯ 700 ಕೋಟಿ.. ಧ್ವಂಸದಿಂದ 500 ಕೋಟಿ ನಷ್ಟ