ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯ ಮಾಡಿರುವ ಕಾರಣ ಇಂದಿನ ಲೋಕಸಭೆ ಕಲಾಪ ಪದೇ ಪದೆ ಮುಂದೂಡಿಕೆಯಾಯಿತು.
ಓದಿ: ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ: ನಾಳೆಗೆ ಮುಂದೂಡಿಕೆಯಾದ ಕಲಾಪ
ಬೆಳಗ್ಗೆಯಿಂದಲೂ ಕೃಷಿ ಕಾಯ್ದೆ ವಿಚಾರವಾಗಿ ಗದ್ದಲ, ಕೋಲಾಹಲ ಉಂಟಾಗಿತ್ತು. ಹೀಗಾಗಿ ಮೇಲಿಂದ ಮೇಲೆ ಕಲಾಪ ಮುಂದೂಡಿಕೆ ಮಾಡಲಾಗಿತ್ತು. ಸಂಜೆ 4 ಗಂಟೆಗೆ ಕಲಾಪ ಪುನಾರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಕೃಷಿ ಕಾನೂನು ವಿಷಯ ಮಾತನಾಡಲು ಮುಂದಾದರು. ಈ ವೇಳೆ ಡಿಎಂಕೆ ಸದಸ್ಯರು ಧ್ವನಿಗೂಡಿಸಿ, ತಕ್ಷಣವೇ ಕಾಯ್ದೆಗಳನ್ನ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿದರು.
ಇನ್ನು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸದಸ್ಯ ಗುಲಾಮ್ ನಬಿ ಆಜಾದ್ ಕೂಡ ಇದೇ ವಿಷಯವಾಗಿ ಮಾತನಾಡಿ ಕೃಷಿ ಕಾನೂನು ರದ್ದುಗೊಳಿಸುವಂತೆ ಸಲಹೆ ನೀಡಿದರು. ಲೋಕಸಭೆ, ರಾಜ್ಯಸಭೆ ಕಲಾಪ ಆರಂಭವಾದಾಗಿನಿಂದಲೂ ವಿರೋಧ ಪಕ್ಷಗಳು ಕೃಷಿ ಕಾಯ್ದೆ ರದ್ಧತಿಗೆ ಪಟ್ಟು ಹಿಡಿದಿರುವ ಕಾರಣ ಯಾವುದೇ ಚರ್ಚೆ ನಡೆಯಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಮೇಲಿಂದ ಮೇಲೆ ಕಲಾಪ ಮುಂದೂಡಿಕೆಯಾಗುತ್ತಿದೆ.