ಮುಂಬೈ: ಆಸ್ತಿ ವಿವಾದದಲ್ಲಿ ಅಣ್ಣನನ್ನೇ ಇಬ್ಬರು ತಮ್ಮಂದಿರು ಹೊಡೆದು ಕೊಂದಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. 46 ವರ್ಷ ಅಣ್ಣ ಸಾವನ್ನಪ್ಪಿದ್ದಾರೆ. ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಜಿತೇಂದ್ರ ಮೊಟಕುರಿ (43), ಮಹೇಂದ್ರ ಮೊಟಕುರಿ(40) ಬಂಧಿತರು. ರವಿಕುಮಾರ್ ಮೊಟಕುರಿ ಸಾವನ್ನಪ್ಪಿದವರು. ಪತ್ನಿ ಸಪ್ನಾ ಮೊಟಕುರಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಿವರ: ರವಿಕುಮಾರ್ ಜೊಗೇಶ್ವರಿ-ವಿಕ್ಹೊರಕಲಿ ರಸ್ತೆಯ ಗ್ರೀನ್ ರಾಕ್ಸ್ಯಾಂಡ್ ಸೊಸೈಟಿಯಲ್ಲಿ ಮನೆ ಮಾಲೀಕತ್ವದ ಸಂಬಂಧ ಮೂವರು ಅಣ್ಣ-ತಮ್ಮಂದಿರ ಮಧ್ಯೆ ವಿವಾದವಿತ್ತು. ಪ್ರಕರಣ ಕೂಡ ದಾಖಲಾಗಿತ್ತು. ಪ್ರಸ್ತುತ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.
ಆಸ್ತಿ ಪ್ರಕರಣ ಸಂಬಂಧ ಶನಿವಾರ ಮಾತುಕತೆ ನಡೆಸಲು ರವಿಕುಮಾರ್‌ನನ್ನು ಕರೆಸಲಾಗಿದೆ. ಈ ವೇಳೆ ಆತನ ಜೊತೆಗೆ ಇಬ್ಬರು ತಮ್ಮಂದಿರ ಪತ್ನಿಯವರು ವಾಗ್ವಾದಕ್ಕೆ ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ದೈಹಿಕ ಹಲ್ಲೆ ಕೂಡ ನಡೆಸಲಾಗಿದೆ. ರವಿಕುಮಾರ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಹೋಲಿ ಸ್ಪಿರಿಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಾಗುವ ಮುಂಚೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. ರವಿಕುಮಾರ್ ಅವರ ಪತ್ನಿ ನೀಡಿದ ದೂರಿನನ್ವಯ ಐಪಿಸಿ ಸೆಕ್ಷಣ್ 304ರ ಅಡಿಯಲ್ಲಿ ಇಬ್ಬರು ತಮ್ಮಂದಿರು ಮತ್ತು ಅವರ ಹೆಂಡತಿಯರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ತಮ್ಮಂದಿರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೀಗೊಂದು ಅಮಾನವೀಯ ಪ್ರಕರಣ: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಕೌಟುಂಬಿಕ ಕಾರಣದಿಂದ ದೂರಾಗಿ, ತವರು ಮನೆ ಸೇರಿದ್ದ ಹೆಂಡತಿ ಮನೆಗೆ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗಂಡ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ವಂಶಿಕಾ ಸಾವನ್ನಪ್ಪಿದ ಮಹಿಳೆ. ಈಕೆ ಗಂಡ ನರೇಶ್ನಿಂದ ದೂರಾಗಿ ಆರ್ಯನಗರದಲ್ಲಿರುವ ಪೋಷಕರ ಜೊತೆ ವಾಸವಾಗಿದ್ದಳು. ಶುಕ್ರವಾರ ಮಾವನ ಮನೆಗೆ ಬಂದ ಹೆಂಡತಿಯನ್ನು ನರೇಶ್ ಮನೆಗೆ ಮರಳುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಹೆಂಡತಿ ಒಪ್ಪಿಲ್ಲ. ಇದರಿಂದ ಕುಪಿತಗೊಂಡ ಗಂಡ ಕತ್ತರಿಯಿಂದ ಆಕೆಯನ್ನು ಹಲವು ಬಾರಿ ಇರಿದು ಕೊಂದಿದ್ದಾನೆ.
ಕೊಲೆ ಪ್ರಕರಣದ ಬಳಿಕ ನರೇಶ್ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಚೀರಾಟದ ಧ್ವನಿ ಕೇಳಿದ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ತಕ್ಷಣಕ್ಕೆ ವಂಶಿಕಾಳನ್ನು ಕೂಡ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ದಾರುಣ.. ವಿವಾಹಿತೆ ಕಿಡ್ನ್ಯಾಪ್, ಸಾಮೂಹಿಕ ಅತ್ಯಾಚಾರ