ಶ್ರೀನಗರ: ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಉಗ್ರಗಾಮಿ ಆದಿಲ್ ಅಹ್ಮದ್ ವಾನಿಯ ಆಸ್ತಿಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುವಿಕೆ ಎಂದರೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಜಿಪಿಯ ಪೂರ್ವಾನುಮತಿ ಇಲ್ಲದೆ ಈ ಆಸ್ತಿಗಳನ್ನು ಯಾವುದೇ ರೀತಿಯಲ್ಲಿ ವರ್ಗಾಯಿಸಲು, ಗುತ್ತಿಗೆ ನೀಡಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ಬುಧವಾರ ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ಸೇರಿಸಿ ಕಾಶ್ಮೀರದಲ್ಲಿ ಇದುವರೆಗೆ 11 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಮಗ್ರ ವಿಧಾನದ ಭಾಗವಾಗಿ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ಚೋಟಿಗಾಂ ಗ್ರಾಮದ ಸುನೀಲ್ ಕುಮಾರ್ ಹತ್ಯೆಯಲ್ಲಿ ಶೋಪಿಯಾನ್‌ನ ಕುತ್ಪೋರಾ ಗ್ರಾಮದ ಆದಿಲ್ ಅಹ್ಮದ್ ವಾನಿ ಎಂದು ಗುರುತಿಸಲಾದ ಉಗ್ರಗಾಮಿಯು ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಉಗ್ರಗಾಮಿ ಆದಿಲ್ ವಾನಿಯ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಮತ್ತು ಆತನ ಸಂಬಂಧಿಯೋರ್ವನನ್ನು ಬಂಧಿಸಲಾಗಿದೆ.
ಉಗ್ರಗಾಮಿಗಳು ಅಥವಾ ಅವರ ಸಹಚರರಿಗೆ ಆಶ್ರಯ ನೀಡುವ ಜನರ ಆಸ್ತಿಯನ್ನು (ಯುಎಪಿಎ) ಜಪ್ತಿ ಮಾಡಲಾಗುವುದು ಎಂದು ಪೊಲೀಸರು ಇದೇ ವರ್ಷದ ಮಾರ್ಚ್ 24 ರಂದು ಘೋಷಣೆ ಮಾಡಿದ್ದರು.
ಯುಎಲ್‌ಪಿ ಕಾಯಿದೆಯ ಸೆಕ್ಷನ್ 2(ಜಿ) ಮತ್ತು 25 ರ ಪ್ರಕಾರ ಭಯೋತ್ಪಾದನೆಯ ಉದ್ದೇಶಕ್ಕಾಗಿ ಬಳಸಲಾದ ಕೆಲ ಸ್ಥಿರಾಸ್ತಿಗಳ ಮುಟ್ಟುಗೋಲು ಪ್ರಕ್ರಿಯೆಯು ಪ್ರಾರಂಭವಾಗಿದೆ. ಉಗ್ರಗಾಮಿಗಳು ಅಥವಾ ಅವರ ಸಹವರ್ತಿಗಳಿಗೆ ಆಶ್ರಯ ನೀಡಿದಲ್ಲಿ, ಆಶ್ರಯ ನೀಡಿದವರ ಆಸ್ತಿಗಳನ್ನು ಸಹ ಕಾನೂನಿನ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಶ್ರೀನಗರ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಗ್ರರಿಗೆ ಉದ್ದೇಶಪೂರ್ವಕವಾಗಿ ಆಶ್ರಯ ನೀಡಿದ ಆರೋಪದ ಮೇಲೆ ಐದು ವಸತಿ ಆಸ್ತಿಗಳನ್ನು ಜೂನ್ 22 ರಂದು ಶ್ರೀನಗರ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.