ಆಗ್ರಾ(ಉತ್ತರ ಪ್ರದೇಶ): ಪೊಲೀಸ್ ಸಮವಸ್ತ್ರ ಧರಿಸಿ, ಕೈಯಲ್ಲಿ ರಿವಾಲ್ವರ್ ಹಿಡಿದು ಪೊಲೀಸ್ ಠಾಣೆಯಲ್ಲೇ ಹಿಂದಿ ಸಿನಿಮಾ ರಂಗ್ಭಾಜಿ ಚಿತ್ರದ ಡೈಲಾಗ್ ಹೊಡೆದು ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದ ಮಹಿಳಾ ಕಾನ್ಸ್ಟೇಬಲ್ ಪ್ರಿಯಾಂಕಾ ಮಿಶ್ರಾಗೆ ಇದೀಗ ಲಕ್ ಖುಲಾಯಿಸಿದೆ.
2020ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದ ಉತ್ತರ ಪ್ರದೇಶದ ಪ್ರಿಯಾಂಕಾ ಮಿಶ್ರಾ, ಠಾಣೆಯಲ್ಲೇ ಸಮವಸ್ತ್ರಧಾರಿಯಾಗಿ ಸಿನಿಮಾ ಡೈಲಾಗ್ ಹೊಡೆದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವಾದ ಹುಟ್ಟುಹಾಕಿತ್ತು. ಹೀಗಾಗಿ ಹಿರಿಯ ಅಧಿಕಾರಿಗಳು ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ..
ಇನ್ಸ್ಟ್ರಾಗ್ರಾಂನಲ್ಲಿ ಇವರು ಹಾಕಿದ್ದ ವಿಡಿಯೋ ಸಿಕ್ಕಾಪಟ್ಟೆ ವೀಕ್ಷಣೆಗೊಳಪಟ್ಟಿತ್ತು. ಹೀಗಾಗಿ ಕೆಲವೇ ದಿನಗಳಲ್ಲಿ ಮಿಶ್ರಾ ಇನ್ಸ್ಟಾಗ್ರಾಂ ಫಾಲೋವರ್ಸ್ಗಳ ಸಂಖ್ಯೆ 3,700 ರಿಂದ 15,400ಕ್ಕೆ ಏರಿಕೆಯಾಗಿತ್ತು. ಇದೀಗ ಅವರಿಗೆ ವೆಬ್ ಸಿರೀಸ್ ಹಾಗೂ ಮಾಡೆಲಿಂಗ್ಗಳಲ್ಲಿ ನಟನೆ ಮಾಡುವಂತೆ ಆಫರ್ಗಳ ಸುರಿಮಳೆಯಾಗುತ್ತಿದೆ.
ಇದನ್ನೂ ಓದಿ: ಸಮವಸ್ತ್ರ ತೊಟ್ಟು, ರಿವಾಲ್ವರ್ ತೋರಿಸಿ ಸಿನಿಮಾ ಡೈಲಾಗ್ ಹೊಡೆದಿದ್ದ ಮಹಿಳಾ ಪೊಲೀಸ್ ರಾಜೀನಾಮೆ
ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ ಪ್ರಿಯಾಂಕ ಮತ್ತೊಂದು ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ಕೂಡಾ ವೈರಲ್ ಆಗಿದ್ದು, ಅವರ ಅನುಯಾಯಿಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬರಲು ಕಾರಣವಾಗಿತ್ತು.
ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, 'ತಮಗೆ ವೆಬ್ ಸರಣಿ ಹಾಗೂ ಮಾಡೆಲಿಂಗ್ನಲ್ಲಿ ನಟನೆ ಮಾಡಲು ಆಫರ್ ಬರುತ್ತಿವೆ' ಎಂದು ತಿಳಿಸಿದರು.
'ನನಗೆ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮಾಡೆಲಿಂಗ್ ಹಾಗೂ ವೆಬ್ ಸರಣಿಗಳಲ್ಲಿ ನಟನೆ ಮಾಡುತ್ತೇನೆ. ಆದರೆ ಇಲ್ಲಿಯವರೆಗೆ ಬಂದಿರುವ ಯಾವುದೇ ಆಫರ್ ಸ್ವೀಕರಿಸಿಲ್ಲ. ಅದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ' ಎಂದರು.