ಕೊಚ್ಚಿ(ಕೇರಳ): ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಲೋಪಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಈ ವೇಳೆ, ನೌಕಾಪಡೆಯ ಹೊಸ ಧ್ವಜವನ್ನು ಅವರು ಅನಾವರಣಗೊಳಿಸಿದರು.
ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲು ನೌಕಾಪಡೆ ಲಾಂಛನವನ್ನು ಬದಲಾವಣೆ ಮಾಡಲಾಗಿದೆ. ಭಾರತೀಯ ಕಡಲ ಪರಂಪರೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದೆ. ನೌಕಾಧ್ವಜಕ್ಕೆ ನಿಶಾನ್ ಎಂದು ಹೆಸರಿಡಲಾಗಿದ್ದು ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಪುಷ್ಠಿ ನೀಡುವ ಉದ್ದೇಶದಿಂದ ಹೊಸ ಧ್ವಜ ತಯಾರಿಸಲಾಗಿದೆ.
ನೌಕಾಪಡೆಯ ಧ್ವಜದಲ್ಲಿ ಇಲ್ಲಿಯವರೆಗೆ ನಾಲ್ಕು ಬದಲಾವಣೆಗಳಾಗಿವೆ. 2001ರಿಂದ 2004ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಧ್ವಜದಲ್ಲಿದ್ದ ಅಡ್ಡ ಚಿಹ್ನೆಯನ್ನು ತೆಗೆದುಹಾಕಲಾಗಿತ್ತು. ಆದರೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅದನ್ನು ಮರಳಿ ತಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಕಾಪಡೆಯ ಧ್ವಜವು ಬಿಳಿ ಬಣ್ಣದಲ್ಲಿದೆ. ಲಂಬ ಮತ್ತು ಅಡ್ಡ ಕೆಂಪು ಪಟ್ಟಿಗಳನ್ನು ಹೊಂದಿದೆ. ಇದು ಸೇಂಟ್ ಜಾರ್ಜ್ ಶಿಲುಬೆಯನ್ನು ಸಂಕೇತಿಸುತ್ತದೆ. ಆದರೆ, ಇದೀಗ ಅಶೋಕ್ ಚಿಹ್ನೆ ಹೊಂದಿದ್ದು, ಅದರ ಕೆಳಗೆ ಸತ್ಯಮೇಯ ಜಯತೇ ಎಂದು ಬರೆಯಲಾಗಿದೆ. ಅಲ್ಲದೆ, ಮೇಲಿನ ಮೂಲೆಯಲ್ಲಿ ತ್ರಿವರ್ಣವಿದೆ. ಬ್ರಿಟಿಷರ ಕಾಲದ ಸಂಕೇತವಾಗಿರುವ ನೌಕಾಪಡೆಯ ಧ್ವಜದಲ್ಲಿರುವ ಶಿಲುಬೆಯನ್ನು ತೆಗೆದು ಹಾಕಲಾಗಿದೆ.
ಇದನ್ನೂ ಓದಿ: ಕೊಚ್ಚಿಯಲ್ಲಿ ನೌಕಾಸೇನೆಯಿಂದ ಪ್ರಧಾನಿ ನರೇಂದ್ರ ಮೋದಿಗೆ 'ಗಾರ್ಡ್ ಆಫ್ ಆನರ್': ವಿಡಿಯೋ
ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.