ಮೋತಿಹಾರಿ (ಬಿಹಾರ): ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅರ್ಚಕರೊಬ್ಬರಿಗೆ ಹಾಡಹಗಲೇ ತಲೆಗೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಸುರೇಶ್ ಸಿಂಗ್ ಅಲಿಯಾಸ್ ಸುರೇಶ್ ಮಸ್ತಾನ್ ಎಂಬುವವರೇ ಕೊಲೆಯಾದ ಅರ್ಚಕ.
ಇಲ್ಲಿನ ಕುಂಡ್ವಾ ಚೈನ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೈಲ್ವೆ ನಿಲ್ದಾಣದ ಬಳಿಯ ದೇವಸ್ಥಾನದಲ್ಲಿ ಸುರೇಶ್ ಸಿಂಗ್ ಅರ್ಚಕನಾಗಿದ್ದರು. ಇಂದು ಮಧ್ಯಾಹ್ನ ದೇವಸ್ಥಾನದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆ ಕುರಿತು ಮಾಹಿತಿ ಅರಿತ ಗ್ರಾಮಸ್ಥರು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇತ್ತ, ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಮುಂದಾದರು. ಆದರೆ, ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದರಿಂದ ಸ್ಥಳದಲ್ಲಿ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಕುಂದ್ವಾ ಚೈನ್‌ಪುರ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ರಮಣ್ ಕುಮಾರ್ ಸ್ಥಳಕ್ಕಾಗಮಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೂ, ಸ್ಥಳೀಯರು ಪಟ್ಟು ಸಡಿಸಲಿಲ್ಲ. ಹೀಗಾಗಿ ಸುಮಾರು ಹೊತ್ತು ಮೃತದೇಹ ಸ್ಥಳದಲ್ಲೇ ಇತ್ತು. ಸದ್ಯಕ್ಕೆ ಈ ಕೊಲೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
ಇದನ್ನೂ ಓದಿ: ಹೊಸ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ ಕೊಂದ ಯುವತಿ ಕುಟುಂಬಸ್ಥರು