ಚಂಡೀಗಢ (ಪಂಜಾಬ್): ಪಂಜಾಬ್‌ನಲ್ಲಿ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ನಡುವೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯಪಾಲರು ಮತ್ತೊಮ್ಮೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಎಚ್ಚರಿಕೆ ನೀಡಿದ್ದಾರೆ. ಸತತವಾಗಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ಈ ಕ್ರಮವೇ ಕೊನೆಯ ಆಯ್ಕೆಯಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
''ರಾಜಭವನ ಕೇಳುವ ಯಾವುದೇ ಮಾಹಿತಿಯನ್ನು ಸರ್ಕಾರ ನೀಡುತ್ತಿಲ್ಲ. ಇದು ಒಂದು ರೀತಿಯ ಸಾಂವಿಧಾನಿಕ ಕರ್ತವ್ಯದ ಅಗೌರವವಾಗಿದ್ದು, ಮುಖ್ಯಮಂತ್ರಿಗಳ ಈ ವರ್ತನೆಯ ನಂತರ ನಮಗೆ ಕಾನೂನು ಮತ್ತು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸದೆ ಬೇರೆ ದಾರಿಯಿಲ್ಲ. ರಾಜಭವನದಿಂದ ಬಂದಿರುವ ಪತ್ರಗಳಿಗೆ ಉತ್ತರ ನೀಡದಿದ್ದರೆ, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ರಾಜ್ಯಪಾಲ ಪುರೋಹಿತ್ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಬರೆದಿದ್ದಾರೆ. ಶುಕ್ರವಾರ ನಾಲ್ಕು ಪುಟಗಳ ಈ ಪತ್ರ ಬರೆದಿದ್ದು, ಇದು ಮಾಧ್ಯಮಗಳಿಗೆ ಲಭ್ಯವಾಗಿದೆ.
ಇದನ್ನೂ ಓದಿ: Tomatoe: ರಾಜಭವನದ ಮೆನುವಿನಲ್ಲಿ ಟೊಮೆಟೊ ಬಳಕೆ ಬೇಡವೆಂದ ಪಂಜಾಬ್ ರಾಜ್ಯಪಾಲ
ಸಿಎಂಗೆ ಬರೆದಿರುವ ಪತ್ರದಲ್ಲಿ ಪಂಜಾಬ್‌ನಲ್ಲಿ ಮಾದಕ ವ್ಯಸನ ಉತ್ತುಂಗದಲ್ಲಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ''ಏಜೆನ್ಸಿಗಳ ವರದಿಗಳ ಪ್ರಕಾರ, ರಾಜ್ಯದ ಔಷಧಿ ಅಂಗಡಿಗಳಲ್ಲಿಯೂ ಡ್ರಗ್ಸ್ ಲಭ್ಯವಿವೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಮದ್ಯದಂಗಡಿಗಳಲ್ಲಿಯೂ ಡ್ರಗ್ಸ್ ಮಾರಾಟವಾಗುತ್ತಿದೆ. ಇತ್ತೀಚೆಗೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಆರ್‌ಬಿ) ಮತ್ತು ಚಂಡೀಗಢ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಲೂಧಿಯಾನದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ 66 ಮದ್ಯದಂಗಡಿಗಳನ್ನು ಮುಚ್ಚಿಸಿದ್ದಾರೆ. ಸಂಸತ್ತಿನ ಸ್ಥಾಯಿ ಸಮಿತಿಯ ಇತ್ತೀಚಿನ ವರದಿಯು ಪಂಜಾಬ್‌ನಲ್ಲಿ ಪ್ರತಿ ಐದು ಜನರಲ್ಲಿ ಒಬ್ಬರು ಮಾದಕ ವ್ಯಸನಿಯಾಗಿದ್ದಾರೆ ಎಂಬ ಮಾಹಿತಿಯನ್ನು ನೀಡಿದೆ'' ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಡ್ರಗ್ಸ್ ವಿಚಾರವಾಗಿ ಈವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೂಡಲೇ ವರದಿ ಕಳುಹಿಸುವಂತೆ ಸಿಎಂಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ದಶಮಾನೋತ್ಸವಕ್ಕೆ ರಾಜ್ಯಪಾಲರಿಗಿಲ್ಲ ಆಹ್ವಾನ!
ಮುಂದುವರೆದು, ''ಸಂವಿಧಾನದ 356ನೇ ವಿಧಿಯ ಅಡಿಯಲ್ಲಿ ಸಂವಿಧಾನದ ಯಂತ್ರದ ವೈಫಲ್ಯವಾದರೆ ರಾಷ್ಟ್ರಪತಿಗಳಿಗೆ ವರದಿ ರಾಜ್ಯಪಾಲರು ವರದಿ ನೀಡಬಹುದು. ಐಪಿಸಿ ಸೆಕ್ಷನ್ 124ರಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಪ್ರಕ್ರಿಯೆ ಆರಂಭಿಸುವ ನಿರ್ಧಾರದ ಕುರಿತು ಮಾಹಿತಿ ಪಡೆಯುವ ಮುನ್ನ ನನ್ನ ಪತ್ರದಲ್ಲಿ ಉಲ್ಲೇಖಿಸಿದ ಮಾಹಿತಿ ಒದಗಿಸಬೇಕೆಂದು'' ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಅಲ್ಲದೇ, 2023ರ 28 ಫೆಬ್ರವರಿ 28ರಂದು ಸಿಎಂ ಭಗವಂತ್ ಮಾನ್ ಸಲ್ಲಿಸಿದ್ದ ರಿಟ್ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ನ ಹೇಳಿಕೆಯನ್ನೂ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ''ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಇಬ್ಬರೂ ಸಾಂವಿಧಾನಿಕ ಪದಾಧಿಕಾರಿಗಳು. ಇಬ್ಬರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸಂವಿಧಾನವು ನಿಗದಿ ಪಡಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ'' ಎಂದು ತಮ್ಮ ಪತ್ರದಲ್ಲಿ ರಾಜ್ಯಪಾಲರು ಬರೆದಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲ v/s ಸರ್ಕಾರ: ತಮಿಳುನಾಡು ಗವರ್ನರ್ ವಿರುದ್ಧ ಸಿಎಂ ಸ್ಟಾಲಿನ್ ಮತ್ತೊಂದು ನಿರ್ಣಯ